ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭ ಮಂಡಿಸಲು ಪಟ್ಟಿ ಮಾಡಲಾದ ವಿಧೇಯಕಗಳಲ್ಲಿ ಬಹು ರಾಜ್ಯ ಕೋ-ಆಪರೇಟಿವ್ ಸೊಸೈಟಿಗಳ (ತಿದ್ದುಪಡಿ)ವಿಧೇಯಕ, ದಿವಾಳಿತನ ಸಂಹಿತೆ (ತಿದ್ದುಪಡಿ) ವಿಧೇಯಕ, ಪತ್ರಿಕೆ ಹಾಗೂ ನಿಯಂತಕಾಲಿಕಗಳ ನೋಂದಣಿ ವಿಧೇಯಕ-2022, ಮಾನವ ಸಾಗಾಟ (ರಕ್ಷಣೆ, ಪಾಲನೆ ಹಾಗೂ ಪುನರ್ವಸತಿ) ವಿಧೇಯಕ-2022 ಹಾಗೂ ಪ್ರಾಚೀನ ಸ್ಮಾರಕಗಳು, ಪುರಾತತ್ವ ನಿವೇಶನ ಮತ್ತು ಅವಶೇಷ (ತಿದ್ದುಪಡಿ) ವಿಧೇಯ-2022 ಸೇರಿವೆ.
ಬಹು ರಾಜ್ಯ ಕೋ-ಆಪರೇಟಿವ್ ಸೊಸೈಟಿ (ತಿದ್ದುಪಡಿ) ವಿಧೇಯಕ ಕೋ-ಆಪರೇಟಿವ್‌ಗಳಲ್ಲಿ ಸರಕಾರದ ಪಾತ್ರವನ್ನು ತರ್ಕಬದ್ಧಗೊಳಿಸಲು ಹಾಗೂ ಬಹು ರಾಜ್ಯ ಕೋ-ಆಪರೇಟಿವ್ ಸೊಸೈಟಿಗಳ ಕಾರ್ಯನಿರ್ವಹಣೆಯಲ್ಲಿ ಭಾಗೀದಾರಿಕೆಯನ್ನು ಹೆಚ್ಚಿಸಲು ಬಯಸುತ್ತದೆ.
ಅದೇ ರೀತಿ ದೀವಾಳಿತನದ ಸಂಹಿತೆ (ತಿದ್ದುಪಡಿ) ವಿಧೇಯಕ ಗಡಿಯಾಚೆಗಿನ ದಿವಾಳಿತನದ ನಿಬಂಧನೆಗಳನ್ನು ಪರಿಚಯಿಸುವ ಮೂಲಕ ದಿವಾಳಿತನದ ಸಂಹಿತೆಯನ್ನು ಬಲಪಡಿಸಲು ಬಯಸುತ್ತದೆ. ಇತರ ತಿದ್ದುಪಡಿಗಳು ಒತ್ತಡದಲ್ಲಿರುವ ಆಸ್ತಿಗಳು ಹಾಗೂ ಅದರ ಮೌಲ್ಯವನ್ನು ಗರಿಷ್ಠಗೊಳಿಸಲು ಕಾಲಮಿತಿಯ ನಿರ್ಧಾರವನ್ನು ಬಯಸುತ್ತದೆ.
ಸಣ್ಣ ಹಾಗೂ ಮಧ್ಯಮ ಪ್ರಕಾಶಕರ ದೃಷ್ಟಿಕೋನದಿಂದ ಅಸ್ತಿತ್ವದಲ್ಲಿರುವ ಕಾಯಿದೆಯ ಕಾರ್ಯ ವಿಧಾನವನ್ನು ಸರಳಗೊಳಿಸಲು, ಪತ್ರಿಕಾ ಸ್ವಾತಂತ್ರ್ಯದ ಮೌಲ್ಯವನ್ನು ಎತ್ತಿ ಹಿಡಿಯಲು ಹಾಗೂ ನಿರಪರಾಧಿಕರಣಗೊಳಿಸಲು ಪತ್ರಿಕೆ ಹಾಗೂ ಪುಸ್ತಕ ನೋಂದಣಿ (ಪಿಆರ್‌ಬಿ)ಕಾಯೆ-1867ರ ಬದಲಿಗೆ ಹೊಸ ವಿಧೇಯಕ ಬಯಸುತ್ತಿದೆ. ಪ್ರಸ್ತಾವಿತ ವಿಧೇಯಕ ಪತ್ರಿಕಾ ಪ್ರಧಾನ ನೋಂದಣಿ ಆರಂಭಿಸಲು ಹಾಗೂ ಡಿಜಿಟಲ್ ಮಾಧ್ಯಮವನ್ನು ತನ್ನ ವ್ಯಾಪ್ತಿಗೆ ತರಲು ಅವಕಾಶ ನೀಡುತ್ತದೆ.
ಸಣ್ಣ ಪ್ರಕಾಶಕರು ಮತ್ತು ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಈ ವಿಧೇಯಕವನ್ನು ಮಂಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿರುವುದರಿಂದ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ದೇಶದಲ್ಲಿ ಭಿನ್ನಾಭಿಪ್ರಾಯ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷಗಳು ಈಗಾಗಲೇ ಆರೋಪಿಸಿವೆ.
ಕಳೆದ ವರ್ಷ ಮುಂಗಾರು ಅಧಿವೇಶನ ತೀವ್ರ ಚರ್ಚೆಯೊಂದಿಗೆ ಅವಧಿಗಿಂತ ಎರಡು ದಿನ ಮುಂಚಿತವಾಗಿ ಕೊನೆಗೊಂಡಿತ್ತು.