ನವದೆಹಲಿ: ಭಾರತ-ಚೀನಾ ಗಡಿ ಭಾಗದಲ್ಲಿ ಹೊಸದೊಂದು ಸಮಸ್ಯೆ ಶುರುವಾಗಿದೆ. ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಚೀನಾದ 5ಜಿ ನೆಟ್ವರ್ಕ್ ಉಪಟಳ ಹೆಚ್ಚಾಗಿದೆ.
ಚೀನಾ ಗಡಿ ಪ್ರದೇಶದಲ್ಲಿ 5ಜಿ ನೆಟ್ವರ್ಕ್ ಪರಿಚಯಿಸಿದ್ದು, ಇದು ಈಗ ಭಾರತೀಯ ಸೈನಿಕರ ರೇಡಿಯೋ ಸಂವಹನಕ್ಕೆ ತೀವ್ರ ಅಡ್ಡಿಯುಂಟುಮಾಡುತ್ತಿದೆ.
ಎಲ್‌ಎಸಿಯಾದ್ಯಂತ 5 ಜಿ ತರಂಗಗಳ ಕಾರಣದಿಂದ ಸಂವಹನ ಸಾಧನಗಳಲ್ಲಿ ವಿಚಿತ್ರವಾದ ಶಬ್ದ ಉಂಟಾಗುತ್ತಿದೆ ಎಂದು ತಿಳಿದುಬಂದಿದ್ದು, ಇದರಿಂದ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ಸದ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕೆ-ಬ್ಯಾಂಡ್ ಫ್ರೀಕ್ವೆನ್ಸಿಯನ್ನು ಬಳಸಿಕೊಳ್ಳುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಭಾರತೀಯ ಸೇನಾಪಡೆಗಳಿಗಾಗಿಯೇ ಹೊಸ ಉಪಗ್ರಹ ಉಡಾವಣೆ ಮಾಡುವ ಯೋಜನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಇದು ಸೇನೆಗೆ ಮಾತ್ರ ಸೀಮಿತವಾಗಿದ್ದು, ಸಾಮಾನ್ಯ ಜನರು ಮತ್ತು ವಾಣಿಜ್ಯ ಬಳಕೆಗೂ ಸಹ ಮುಕ್ತವಾಗಿರುವುದಿಲ್ಲ. ಸದ್ಯ ಸಮಸ್ಯೆ ಪರಿಹಾರ ಕಂಡುಕೊಳ್ಳುವಲ್ಲಿ ಸೇನೆ ತೊಡಗಿಸಿಕೊಂಡಿದೆ.
ಭಾರತದ ವಿರೋಧದ ನಡುವೆಯೂ ಚಿನಾ ಪೊಂಗಾಂಗ್ ಲೇಕ್ನಲ್ಲಿ ಸೇತುವೆ ನಿರ್ಮಿಸುತ್ತಿದ್ದು, ಈ ಭಾಗದಲ್ಲಿಯೂ ಕೂಡ ಈ ಸಮಸ್ಯೆ ಕಂಡುಬಂದಿದೆ. ಭಾರತ ಮತ್ತು ಚೀನಾ 3488 ಕಿಮೀ ಉದ್ದದ ಗಡಿ ಇದ್ದು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಹಾದುಹೋಗಿವೆ.
ಭಾರತ ಗಡಿಗೆ ಹೊಂದಿಕೊಂಡಂತಿರುವ ಲಡಾಖ್ ವಲಯದಾದ್ಯಂತ ಕೂಡ ಈ ಸಮಸ್ಯೆ ಕಂಡುಬಂದಿದೆ. ಇನ್ನು ಜೂನ್ 2ರಂದು ಕೂಡ ಈ ಸಮಸ್ಯೆ ಕಾಣಿಸಿಕೊಂಡಿತ್ತು.




.webp)
