ಉಪ್ಪಳ: ಬುಧವಾರ ಗುರುಪೂರ್ಣಿಮೆಯ ದಿನ ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸಾಮೀಜಿಯವರು ತಮ್ಮ 18ನೇ ಚಾತುರ್ಮಾಸ್ಯವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಿಸಿದರು.
ಬೆಳಿಗ್ಗೆ ಗಣಹೋಮ, ಭಗವಾನ್ ಶ್ರೀ ನಿತ್ಯಾನಂದ ಗುರುದೇವರಿಗೆ ಸೀಯಾಳಾಭಿಷೇಕ ನಂತರ ವ್ಯಾಸ ಹವನ ನಡೆಯಿತು. ಸಂಜೆ ಸಂಗೀತ ಕಲಾ ಕ್ಷೇತ್ರ ಮಂಗಳೂರು ಇವರ ಭಜನಾ ಕಾರ್ಯಕ್ರಮದ ನಂತರ ಮಹಾಪೂಜೆ ನಡೆದು, ಪರಮಪೂಜ್ಯರ ಶ್ರೀ ಗುರು ಪಾದುಕಾ ಪೂಜೆ ನಡೆಯಿತು. ಶ್ರೀಗಳವರು ತಮ್ಮ ಚಾತುರ್ಮಾಸ್ಯ ಸಂದೇಶದಲ್ಲಿ "ನಮ್ಮೆಲ್ಲರ ಲಕ್ಷ್ಯ ಶ್ರೀಗುರುಗಳ ಮಾರ್ಗದರ್ಶನದಲ್ಲಿ ನಮ್ಮ ಜ್ಞಾನದ ಹಸಿವನ್ನು ಹಿಂಗಿಸಿ, ದೇವರ ಚರಣ ಪ್ರಾಪ್ತಿಯಾಗಬೇಕು ಎಂದರಲ್ಲದೆ ದೀನ ದು:ಖಿಗಳ ಸೇವೆ, ಸನಾತನ ಧರ್ಮದ ರಕ್ಷಣೆಯನ್ನು ನಾವು ಮಾಡಬೇಕು"ಎಂದು ನುಡಿದರು. ಭಕ್ತ ಜನರು ಶ್ರೀ ಗುರೂಜಿಯವರಿಗೆ ಫಲಸಮರ್ಪಣೆ ಮಾಡಿ ಆಶೀರ್ಮಂತ್ರಾಕ್ಷತೆ ಪಡೆದು ಪುನೀತರಾದರು.
ಸೆಪ್ಟೆಂಬರ್ 10 ರ ವರೆಗೆ ಚಾತುರ್ಮಾಸ್ಯ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರತೀವಾರ ವಿದ್ವಾಂಸರುಗಳ ಪ್ರವಚನ ನಡೆಯಲಿದೆ.




.jpg)
