ಅಹಮದಾಬಾದ್: 'ಮುಂಬರುವ ವರ್ಷಗಳಲ್ಲಿ ನೈಸರ್ಗಿಕ ಕೃಷಿಯ ಬೃಹತ್ ಆಂದೋಲನವು ವ್ಯಾಪಕವಾಗಿ ಯಶಸ್ಸು ಸಾಧಿಸಲಿದ್ದು, ರೈತರು ಈ ಬದಲಾವಣೆಗೆ ಎಷ್ಟು ಬೇಗ ತೆರೆದುಕೊಳ್ಳುವರೋ ಅಷ್ಟು ಅದರ ಲಾಭ ಗಳಿಸಲಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
0
samarasasudhi
ಜುಲೈ 10, 2022
ಅಹಮದಾಬಾದ್: 'ಮುಂಬರುವ ವರ್ಷಗಳಲ್ಲಿ ನೈಸರ್ಗಿಕ ಕೃಷಿಯ ಬೃಹತ್ ಆಂದೋಲನವು ವ್ಯಾಪಕವಾಗಿ ಯಶಸ್ಸು ಸಾಧಿಸಲಿದ್ದು, ರೈತರು ಈ ಬದಲಾವಣೆಗೆ ಎಷ್ಟು ಬೇಗ ತೆರೆದುಕೊಳ್ಳುವರೋ ಅಷ್ಟು ಅದರ ಲಾಭ ಗಳಿಸಲಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಸೂರತ್ ನಗರದಲ್ಲಿ ಆಯೋಜಿಸಿದ್ದ 'ನೈಸರ್ಗಿಕ ಕೃಷಿ' ಕುರಿತ ಸಮಾವೇಶವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, 'ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು ಮಣ್ಣಿನ ಗುಣಮಟ್ಟವನ್ನು ರಕ್ಷಿಸುವುದರ ಜತೆಗೆ ಅದರ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಇದು ಆರ್ಥಿಕ ಯಶಸ್ಸಿಗೆ ಆಧಾರವೂ ಆಗಲಿದೆ. ಈ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಾಗ ನೀವು ಭೂಮಿತಾಯಿಯ ಜತೆಗೆ ಗೋಮಾತೆಯ ಸೇವೆ ಮಾಡುವ ಸೌಭಾಗ್ಯವನ್ನೂ ಪಡೆಯುತ್ತೀರಿ' ಎಂದರು.
ಈ ನಿಟ್ಟಿನಲ್ಲಿ ಸೂರತ್‌ನಲ್ಲಿ ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಮೋದಿ, 'ಸೂರತ್‌ನಿಂದ ಹೊರಹೊಮ್ಮುತ್ತಿರುವ ನೈಸರ್ಗಿಕ ಕೃಷಿಯ ಮಾದರಿಯು ಇಡೀ ದೇಶಕ್ಕೆ ಮಾದರಿಯಾಗುವಂಥದ್ದು. ನೈಸರ್ಗಿ ಕೃಷಿಯು ಭಾರತಕ್ಕೆ ಸುಸ್ಥಿರ ಅಭಿವೃದ್ಧಿ ಮತ್ತು ಶುದ್ಧ ಆಹಾರದ ಬಗ್ಗೆ ಜಗತ್ತನ್ನು ಮುನ್ನಡೆಸಲು ಅವಕಾಶವನ್ನು ನೀಡುತ್ತದೆ. ಈ ವಿಷಯದಲ್ಲಿ ದೇಶವು ಸಾವಿರಾರು ವರ್ಷಗಳಿಂದ ಹೊಂದಿರುವ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳಲು ಸಾಧ್ಯವಾಗಲಿದೆ' ಎಂದು ಹೇಳಿದರು.
ನೈಸರ್ಗಿಕ ಕೃಷಿಯ ಪ್ರಯೋಜನಗಳನ್ನು ವಿವರಿಸಿದ ಮೋದಿ, 'ನಮ್ಮ ಸರ್ಕಾರವು ಈ ಕೃಷಿ ಪದ್ಧತಿಯ ಉತ್ತೇಜನಕ್ಕಾಗಿ 'ಪರಂಪರಾಗತ್ ಕೃಷಿ ವಿಕಾಸ್ ಯೋಜನೆ'ಯನ್ನು ಕೈಗೊಂಡಿದೆ. ಈ ಯೋಜನೆಯಡಿ ಲಕ್ಷಾಂತ ರೈತರ ಅನುಕೂಲಕ್ಕಾಗಿ ದೇಶದಾದ್ಯಂತ 30 ಸಾವಿರ ಕ್ಲಸ್ಟರ್‌ಗಳನ್ನು ರಚಿಸಲಾಗಿದೆ. 'ನಮಾಮಿ ಗಂಗೆ' ಯೋಜನೆಯೊಂದಿಗೆ ನೈಸರ್ಗಿಕ ಕೃಷಿಗೂ ಸಂಬಂಧ ಕಲ್ಪಿಸಲಾಗಿದ್ದು, ಗಂಗಾ ನದಿಯುದ್ದಕ್ಕೂ ನೈಸರ್ಗಿಕ ಕೃಷಿ ಕಾರಿಡಾರ್ ರಚಿಸಲು ಪ್ರತ್ಯೇಕ ಅಭಿಯಾನವನ್ನು ಕೈಗೊಳ್ಳಲಾಗಿದೆ. ಈ ಕೃಷಿ ಉತ್ಪನ್ನಗಳನ್ನು ಪ್ರಮಾಣೀಕರಿಸಲು ಸರ್ಕಾರವು ಗುಣಮಟ್ಟದ ಭರವಸೆ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿದೆ. ರೈತರು ಇಂತಹ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಉತ್ತಮ ದರಕ್ಕೆ ರಫ್ತು ಮಾಡುತ್ತಿದ್ದಾರೆ' ಎಂದೂ ಮೋದಿ ವಿವರಿಸಿದರು.