ಕೋಝಿಕ್ಕೋಡ್: ಉತ್ತರ ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದೆ. ಮಳೆಗೆ ನಾಲ್ವರು ಮೃತರಾಗಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವಯನಾಡ್ ಮತ್ತು ಕಾಸರೋಡಲ್ಲಿ ತಲಾ ಓರ್ವರಂತೆ ಮೃತರಾಗಿದ್ದಾರೆ. ಕೋಝಿಕ್ಕೋಡ್ ಎಡಚೇರಿ ಅಳಿಸೇರಿ ಮೂಲದ ಅಭಿಲಾಷ್ (40) ಮತ್ತು ಚೆರುವಣ್ಣೂರಿನ ವಿದ್ಯಾರ್ಥಿ ಮುಹಮ್ಮದ್ ಮಿರ್ಷಾದ್ (13) ಮೃತರಾದವರು.
ಮಿರ್ಷಾದ್ ಚೆರುವಣ್ಣೂರಿನ ಮದರಸಾದಿಂದ ಮನೆಗೆ ಹಿಂದಿರುಗುತ್ತಿದ್ದಾಗ ವಾಲಿಪರಂ ಕೆರೆಗೆ ಸೈಕಲ್ ಬಿದ್ದು ಅವಘಡ ನಡೆದಿದೆ. ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟ. ಪಾಚಿಯ ಎಂಬಲ್ಲಿ ನೀರುತುಂಬಿದ್ದ ಹೊಂಡಕ್ಕೆ ಬಿದ್ದು ಅಭಿಲಾಷ್ ಮೃತಪಟ್ಟಿದ್ದಾನೆ.
ವಯನಾಡಿನ ತೋಮಟುಚಲ್ ನೆಡುಮುಳಿ ಎಂಬಲ್ಲಿ ಭೂಕುಸಿತದಲ್ಲಿ ಓರ್ವ ಸಾವನ್ನಪ್ಪಿದ್ದು, ಕೊಲಿಯಾಡಿಯ ನಾಯ್ಕಂಬಾಡಿ ಕಾಲೋನಿಯ ಬಾಬು (37) ಮೃತಪಟ್ಟಿದ್ದಾನೆ. ಈ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ರಕ್ಷಣಾ ಗೋಡೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮಂಜೇಶ್ವರ ತಾಲೂಕು ಪೈವಳಿಕೆ ಕೊಂದಲಕಾಡು ಎಂಬಲ್ಲಿ ಪತ್ರಕರ್ತ ಸ್ಟೀಪನ್ ಕ್ರಾಸ್ತಾ ಎಂಬವರ ಪುತ್ರ ವಿದ್ಯಾರ್ಥಿ ಸ್ಯಾನ್ ಅರುಣ್ ಕ್ರಾಸ್ತಾ (12) ಮೃತಪಟ್ಟಿದ್ದಾನೆ. ಜನರು ತೀತ್ರ ಜಾಗರೂಕತೆ ಪಾಲಿಸಬೇಕೆಂದು ಸಂಬಂಧಪಟ್ಟವರು ಮತ್ತೆ ಮತ್ತೆ ಮನವಿ ಮಾಡಿದ್ದಾರೆ.





