ಕೊಚ್ಚಿ/ಕುಂಬಳೆ: ಕನ್ನಡದ ಖ್ಯಾತ ನಿರ್ದೇಶಕ ಕಿರಣ್ ರಾಜ್ ಹೆಸರಿನಲ್ಲಿ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ನಕಲಿ ಪೋನ್ ಕರೆ ವಂಚನೆ ನಡೆದಿದೆ.
ಖ್ಯಾತ ನಟಿ ಮಾಲಾ ಪಾರ್ವತಿ ಅವರನ್ನು ವಂಚನೆಗೆ ಗುರಿಪಡಿಸುವ ಯತ್ನ ನಡೆದಿದೆ. ಕಾಸರಗೋಡಿನ ಯುವ ನಿರ್ದೇಶಕ ಕಿರಣ್‍ರಾಜ್ ಅವರು ಕನ್ನಡ ಚಿತ್ರ '777 ಚಾರ್ಲಿ' ಮೂಲಕ ಪ್ರಸಿದ್ಧರಾಗಿದ್ದಾರೆ.
ಕಿರಣರಾಜ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ನಟಿಗೆ ನಿರಂತರವಾಗಿ ದೂರವಾಣಿ ಕರೆ ಮಾಡಿ ಹೊಸ ಚಿತ್ರದಲ್ಲಿ ನಟಿಸಲು ಡೇಟ್ ಕೇಳುತ್ತಿದ್ದು, ಈ ಬಗ್ಗೆ 777 ಚಾರ್ಲಿ ಚಿತ್ರ ಸೌಂಡ್ ಡಿಸೈನರ್ ಹಾಗೂ ಪರಿಚಿತರಾದ ಎಂ.ಆರ್. ರಾಜಾಕೃಷ್ಣ ಅವರÀನ್ನು ಮಾಲಾ ಪಾರ್ವತಿ ಸಂಪರ್ಕಿಸಿ ವಿಷಯ ತಿಳಿಸಿದ್ದರು. ಈ ಬಗ್ಗೆ ರಾಜಾಕೃಷ್ಣ ಅವರು ಬಳಿಕ ಕಿರಣ್ ರಾಜ್ ಅವರಲ್ಲಿ ಸಮಾಲೋಚಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಕಿರಣರಾಜ್ ಅವರ ಸೂಚನೆ ಮೇರೆಗೆ ಮಾಲಾ ಪಾರ್ವತಿ ಅವರು ಅಪರಿಚಿತ ವ್ಯಕ್ತಿಗೆ ದೂರವಾಣಿ ಕರೆ ಮಾಡಿ ಕಾನ್ಫರೆನ್ಸ್ ಕಾಲ್‍ನಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಮಾಲಾ ಪಾರ್ವತಿ ಅವರು ಕಾನ್ಫರೆನ್ಸ್ ಕರೆಯಲ್ಲಿ ಸಂಪರ್ಕಿಸಿ ಮೋಸಗಾರನನ್ನು ಚಲನಚಿತ್ರದ ವಿವರಗಳನ್ನು ಕೇಳಿದರು. ಅವನು ಮಾತನಾಡಲು ಪ್ರಾರಂಭಿಸಿದಾಗ, ಮಧ್ಯಪ್ರವೇಶಿಸಿ ಆತನು ಯಾರು ಮತ್ತು ಉದ್ದೇಶವೇನು ಎಂದು ಕಿರಣ್ ರಾಜ್ ಕೇಳಿದ್ದು, ಬಲೆಗೆ ಬಿದ್ದೆನೆಂದು ಅರಿತ ವಂಚಕ ಕಾಲ್ ಕಟ್ ಮಾಡಿ ಪೋನ್ ಸ್ವಿಚ್ ಆಫ್ ಮಾಡಿರುವುದಾಗಿ ತಿಳಿದುಬಂದಿದೆ. ಪೋನ್ ಕರೆಯನ್ನು ರೆಕಾರ್ಡ್ ಮಾಡಿದ್ದೇವೆ ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ.
ಇದು ಬಹಳ ಗಂಭೀರವಾದ ವಿಷಯ. ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ನಾನು ಇದನ್ನು ಎಂದಿಗೂ ಪ್ರೋತ್ಸಾಹಿಸಲಾರೆ. ಮಾಲಾ ಪಾರ್ವತಿ ಈ ಸಮಸ್ಯೆಯನ್ನು ತುಂಬಾ ಬಲವಾಗಿ ಎದುರಿಸಿದ್ದಾರೆ. ಆದರೆ ಇಂತಹ ವಂಚಕರ ಬಲೆಗೆ ಹಲವು ಯುವಕರು ಅದರಲ್ಲೂ ಯುವತಿಯರು ಬೀಳುವ ಆತಂಕವಿದೆ. ಈ ಅಪರಿಚಿತ ವ್ಯಕ್ತಿ ಈ ರೀತಿ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ ಎಂದು ಭಾವಿಸುತ್ತೇನೆ ಎಂದು ಕಿರಣ್ ರಾಜ್ ಆತಂಕ ಹಂಚಿಕೊಂಡಿರುವರು.
ನಟಿ ಮಾಲಾ ಪಾರ್ವತಿಗೆ '777 ಚಾರ್ಲಿ' ನಿರ್ದೇಶಕನ ಹೆಸರಲ್ಲಿ ಕರೆಮಾಡಿ ವಂಚನೆ ಯತ್ನ: ಮೋಸಗಾರನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ನೈಜ ನಿರ್ದೇಶಕ ಕಿರಣ್ ರಾಜ್!
0
ಆಗಸ್ಟ್ 24, 2022





