HEALTH TIPS

ಅಮೆರಿಕ ದಾಳಿಗೆ ಜವಾಹಿರಿ ಫಿನಿಷ್; 9/11ರ ದಾಳಿ ಮಾಸ್ಟರ್​ಮೈಂಡ್​

 

ಅಲ್​ ಖೈದಾ ಮುಖ್ಯಸ್ಥ ಅಲ್​ ಜವಾಹಿರಿಯನ್ನು ಅಮೆರಿಕ ಹತ್ಯೆಗೈದಿದೆ. ಈತನನ್ನು ಏಕೆ ಕೊಲ್ಲಲಾಯಿತು? ಈ ಕಾರ್ಯಾಚರಣೆ ಹೇಗೆ ನಡೆಯಿತು? ಯಾವ ಅಸ್ತ್ರ ಬಳಸಲಾಯಿತು? ಎಂಬ ಸಂಗತಿಗಳತ್ತ ಪನೋಟ.

          ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ದಾಳಿಯ ಮಾಸ್ಟರ್​ವೆುೖಂಡ್ ಆಗಿದ್ದ ಅಲ್​ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿಯನ್ನು ಅಮೆರಿಕ ಹತ್ಯೆ ಮಾಡಿದೆ.

                 ಈ ಮೂಲಕ 9/11ರ ದಾಳಿಗೆ ಒಸಾಮಾ ಬಿನ್ ಲಾಡೆನ್ ನಂತರ ಮತ್ತೊಬ್ಬ ಉಗ್ರ ಪ್ರಮುಖನನ್ನು ಹೊಡೆದುರುಳಿಸಿದಂತಾಗಿದೆ.

                ಲಾಡೆನ್ ನೇತೃತ್ವದ ಅಲ್​ಖೈದಾ ಸಂಘಟನೆಯ ಉಗ್ರರು 2001ರ ಸೆಪ್ಟೆಂಬರ್ 11ರಂದು (9/11) ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ವಿಮಾನಗಳನ್ನು ಸ್ಪೋಟಿಸುವ ಮೂಲಕ ನಡೆಸಿದ ಭೀಕರ ದಾಳಿಯಲ್ಲಿ 2997 ಜನರು ಸಾವನ್ನಪ್ಪಿದ್ದರು. ಜವಾಹಿರಿಯನ್ನು ಈ ದಾಳಿಯ ಸೂತ್ರಧಾರ ಎಂದೇ ಗುರುತಿಸಲಾಗಿತ್ತು. ಕೀನ್ಯಾ, ತಾಂಜೇನಿಯಾದ ಅಮೆರಿಕ ರಾಯಭಾರ ಕಚೇರಿಗಳ ಮೇಲೆಯೂ ಈತ ದಾಳಿ ಸಂಘಟಿಸಿದ್ದ.

                ಲಾಡೆನ್​ನನ್ನು ಅಮೆರಿಕ ಭದ್ರತಾ ಪಡೆಗಳು 2011ರಲ್ಲಿ ಪಾಕಿಸ್ತಾನದಲ್ಲಿ ಹತ್ಯೆ ಮಾಡಿದ ಬಳಿಕ ಜವಾಹಿರಿ ಅಲ್​ಖೈದಾದ ನೇತೃತ್ವ ವಹಿಸಿದ್ದ. ಆತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ (200 ಕೋಟಿ ರೂಪಾಯಿ) ಬಹುಮಾನವನ್ನು ಅಮೆರಿಕ ಘೊಷಿಸಿತ್ತು. ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿ ವಾಯುದಾಳಿ ಕಾರ್ಯಾಚರಣೆ ನಡೆಸಿ, ಜವಾಹಿರಿಯನ್ನು ಹತ್ಯೆ ಮಾಡಿದ ವಿಚಾರವನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೇ ಬಹಿರಂಗಪಡಿಸಿದ್ದಾರೆ.

                    'ನಮ್ಮ ಜನರಿಗೆ ಬೆದರಿಕೆ ಹಾಕುವವರನ್ನು ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಸಮಯವಾದರೂ, ಎಲ್ಲಿಯೇ ಇದ್ದರೂ, ಎಲ್ಲಿಯೇ ಅಡಗಿ ಕುಳಿತಿ ದ್ದರೂ ಅಂಥವರನ್ನು ಅಮೆರಿಕ ಕೊಲ್ಲುತ್ತದೆ' ಎಂದು ಬೈಡೆನ್ ಹೇಳಿದ್ದಾರೆ.

                                 ಕಾರ್ಯಾಚರಣೆಗೆ ವ್ಯಾಪಕ ಸಿದ್ಧತೆ

               ಜವಾಹಿರಿ ಹತ್ಯೆಗೆ ಕಳೆದ 6 ತಿಂಗಳುಗಳಿಂದ ಅಮೆರಿಕ ಗೌಪ್ಯವಾಗಿ ಯೋಜನೆ ರೂಪಿಸಿತ್ತು. ಹಲವಾರು ವರ್ಷಗಳಿಂದ ಜವಾಹಿರಿಯನ್ನು ಬೆಂಬಲಿಸುತ್ತಿರುವ ಜಾಲದ ಕುರಿತು ಮಾಹಿತಿ ಸಂಗ್ರಹಿಸುತ್ತ ಬಂದಿತ್ತು. ಈ ವರ್ಷ ಜವಾಹಿರಿಯ ಕುಟುಂಬ (ಆತನ ಪತ್ನಿ, ಪುತ್ರಿ ಮತ್ತು ಪುತ್ರರು) ಕಾಬೂಲ್​ನಲ್ಲಿರುವ ಮನೆಯೊಂದಕ್ಕೆ ಸ್ಥಳಾಂತರಗೊಂಡಿದ್ದನ್ನು ಅಮೆರಿಕದ ಗುಪ್ತಚರರು ಗುರುತಿಸಿದ್ದರು. ಇದೇ ಸ್ಥಳದಲ್ಲಿ ಜವಾಹಿರಿ ಇರುವುದನ್ನು ಪತ್ತೆ ಮಾಡಿದರು. ದಾಳಿ ನಡೆಸುವುದಕ್ಕಾಗಿ ಆ ಕಟ್ಟಡದ ಸ್ವರೂಪದ ಬಗೆಗೆ ವ್ಯಾಪಕ ಅಧ್ಯಯನ ಕೈಗೊಂಡರು. ನಾಗರಿಕರು ಮತ್ತು ಜವಾಹಿರಿಯ ಕುಟುಂಬಕ್ಕೆ ಹೆಚ್ಚು ಅಪಾಯವಾಗದ ರೀತಿಯಲ್ಲಿ ಆತನನ್ನು ಕೊಲ್ಲಲು ಸಿದ್ಧತೆ, ಮುನ್ನೆಚ್ಚರಿಕೆ ಕೈಗೊಂಡರು. ಜುಲೈ 25ರಂದು ಅಧ್ಯಕ್ಷ ಬೈಡೆನ್ ಅವರು ತಮ್ಮ ಸಂಪುಟದ ಪ್ರಮುಖ ಸದಸ್ಯರು ಮತ್ತು ಸಲಹೆಗಾರ ಜತೆ ಸಭೆ ನಡೆಸಿ, ಜವಾಹಿರಿಯನ್ನು ಕೊಲ್ಲುವುದರಿಂದ ತಾಲಿಬಾನ್ ಜತೆಗೆ ಅಮೆರಿಕದ ಸಂಬಂಧದ ಮೇಲೆ ಉಂಟಾಗುವ ಪರಿಣಾಮದ ಬಗೆಗೆ ಪರಾಮರ್ಶೆ ಮಾಡಿದರು. ನಾಗರಿಕರ ಸಾವು-ನೋವು ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂಬ ಷರತ್ತಿನ ಮೇಲೆ ವಾಯುದಾಳಿ ನಡೆಸಲು ಅನುಮತಿ ನೀಡಿದರು. ಅಂತಿಮವಾಗಿ ಜುಲೈ 30ರಂದು ರಾತ್ರಿ 9.48ಕ್ಕೆ 'ಹೆಲ್​ಫೈರ್ ಕ್ಷಿಪಣಿ' ಮೂಲಕ ದಾಳಿ ನಡೆಸಲಾಯಿತು (ಅಫ್ಘಾನಿಸ್ತಾನದ ಕಾಲಮಾನ ಪ್ರಕಾರ ಜುಲೈ 31ರಂದು ಬೆಳಗ್ಗೆ 6.18ಕ್ಕೆ, ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 7.18).


                             ಭಾರತಕ್ಕೂ ಅಪಾಯಕಾರಿ

             ಅಲ್ ಜವಾಹಿರಿ ನೀತಿ ನಿಲುವುಗಳು ಭಾರತಕ್ಕೂ ಅಪಾಯಕಾರಿಯಾಗಿ ಕಂಡು ಬಂದಿವೆ. ಪಾಶ್ಚಿಮಾತ್ಯ ಶಕ್ತಿಗಳ ವಿರುದ್ಧ ಹೋರಾಟ ಕುರಿತು ಜವಾಹರಿ ಬಿಡುಗಡೆ ಮಾಡುತ್ತಿದ್ದ ವಿಡಿಯೋದಲ್ಲಿ ಅಲ್ಪಮಟ್ಟಿಗೆ ಭಾರತ ಕುರಿತ ಪ್ರಸ್ತಾಪಗಳೂ ಇರುತ್ತಿದ್ದವು. ಕಾಶ್ಮೀರ ಕುರಿತೂ ಆತ ಮಾತನಾಡಿದ್ದ. 2014ರಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಭಾರತೀಯ ಉಪಖಂಡದಲ್ಲಿ ಜಿಹಾದ್ ಸಂಘಟನೆ ರಚನೆ ಕುರಿತು ಹೇಳಿದ್ದ. 'ಬ್ರಿಟಿಷ್ ಭಾರತದ ಗಡಿಯನ್ನು ಜಿಹಾದಿಗಳು ಭೇದಿಸಬೇಕು. ಭಾರತದಲ್ಲಿರುವ ಮುಸ್ಲಿಮರು ಒಗ್ಗಟ್ಟಾಗಬೇಕು' ಎಂದು ಕರೆ ನೀಡಿದ್ದ. ಮೌಲಾನಾ ಅಸಿಮ್ ಓಮರ್​ನನ್ನು ಉಪಖಂಡದಲ್ಲಿ ಅಲ್​ಖೈದಾ ಮುಖ್ಯಸ್ಥನನ್ನಾಗಿ ನೇಮಿಸಿದ್ದ. ಓಮರ್​ನನ್ನು 2019ರಲ್ಲಿ ಹತ್ಯೆಗೈದ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಅಧಿಕಾರಿಗಳು ಈತ ಪಾಕಿಸ್ತಾನಿ ಮೂಲದವನೆಂದು ಹೇಳಿದ್ದರು. ಆದರೆ, ಈತ ಉತ್ತರಪ್ರದೇಶದ ಸಂಭಲ್ ಮೂಲದವನೆಂದು ನಂತರ ತಿಳಿದುಬಂದಿತ್ತು.


                             ಬ್ಲೇಡ್ ಕ್ಷಿಪಣಿ ಬಳಕೆ

             ಎರಡು ಕ್ಷಿಪಣಿಗಳ ಮೂಲಕ ಜವಾಹಿರಿಯನ್ನು ಹತ್ಯೆಗೈಯಲಾಗಿದೆ. ಆದರೆ, ಮನೆಯಲ್ಲಿ ಯಾವುದೇ ಸ್ಫೋಟ ಉಂಟಾಗಿಲ್ಲ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. 'ಹೆಲ್​ಫೈರ್ ಆರ್9ಎಕ್ಸ್' ಕ್ಷಿಪಣಿಗಳನ್ನು ಈ ದಾಳಿಯಲ್ಲಿ ಬಳಸಿರುವುದು ಸ್ಪಷ್ಟ. ಈ ಕ್ಷಿಪಣಿಯನ್ನು ಫ್ಲೈಯಿಂಗ್ ಗಿನ್ಸು (ಹಾರುವ ಚಾಕು) ಹಾಗೂ ನಿಂಜಾ ಬಾಂಬ್ ಎಂದೂ ಕರೆಯಲಾಗುತ್ತದೆ. ಸಿಡಿತಲೆ ಇಲ್ಲದ ಕ್ಷಿಪಣಿ ಇದಾಗಿದ್ದು ಆರು ಬ್ಲೇಡ್​ಗಳನ್ನು ಹೊಂದಿರುತ್ತದೆ. ಈ ಮೂಲಕ ನಿಗದಿತ ಗುರಿಯನ್ನು ಕತ್ತರಿಸಿ ಹಾಕುತ್ತದೆ. ಜವಾಹಿರಿ ಬಾಲ್ಕನಿಯಲ್ಲಿ ನಿಂತಿದ್ದಾಗ ಎರಡು ಕ್ಷಿಪಣಿಗಳನ್ನು ಹಾರಿಸಿ ಹತ್ಯೆಗೈಯಲಾಗಿದೆ. ಬೆಳಗಿನ ಹೊತ್ತು ಬಾಲ್ಕನಿಯಲ್ಲಿ ನಿಂತುಕೊಳ್ಳುವ ರೂಢಿ ಆತನಿಗೆ ಇದ್ದುದನ್ನು ಗುಪ್ತಚರರು ಗುರುತಿಸಿದ್ದರು. ಕಿಟಕಿಗೆ ಹಾನಿಯಾಗಿದ್ದು ಬಿಟ್ಟರೆ ಉಳಿದಂತೆ ಕಟ್ಟಡ ಸುರಕ್ಷಿತವಾಗಿದೆ. ಅಲ್​ಖೈದಾದ ಇನ್ನೊಬ್ಬ ಹಿರಿಯ ನಾಯಕ ಅಬು ಅಲ್ ಕಯರ್ ಅಲ್ ಮಸ್ರಿಯು ಸಿರಿಯಾಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಇದೇ ಕ್ಷಿಪಣಿ ಬಳಸಿ 2017ರಲ್ಲಿ ಹತ್ಯೆಗೈಯಲಾಗಿತ್ತು. ಹೆಲ್​ಫೈರ್ ಕ್ಷಿಪಣಿಗಳನ್ನು ಡ್ರೋನ್ ಬಳಸಿ ಉಡಾಯಿಸಲಾಗುತ್ತದೆ. ಮುಂಚೆ ಸಿಡಿತಲೆ ಬಳಸಿ ಗುರಿಯಲ್ಲಿ ಸ್ಫೋಟ ಮಾಡುವ ರೂಢಿ ಇತ್ತು.

                ಅಲ್ ಜವಾಹಿರಿ ನಿವಾಸದ ಕಿಟಕಿ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗಿರುವುದು.
ಕರ್ನಾಟಕದ ಹಿಜಾಬ್​ಗೆ ಬೆಂಬಲ

             ಕರ್ನಾಟಕದಲ್ಲಿ ಹಿಜಾಬ್ ವಿವಾದ ಉಂಟಾದಾಗ ಜವಾಹಿರಿ ವಿಡಿಯೋ ಸಂದೇಶ ಹರಿಬಿಟ್ಟಿದ್ದ. ಹಿಜಾಬ್ ಪರ ಪ್ರತಿಭಟನೆ ಬೆಂಬಲಿಸಿ ಹೋರಾಟಕ್ಕೆ ಕರೆ ನೀಡಿದ್ದ. ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಕಾಲೇಜಿಗೆ ಬುರ್ಖಾ ಧರಿಸಿ ಬಂದಿದ್ದಾಗ ಕೆಲವು ಕೇಸರಿ ಶಾಲುಧಾರಿ ಯುವಕರು 'ಜೈ ಶ್ರೀರಾಂ' ಎಂದು ಘೋಷಣೆ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಆಕೆ 'ಅಲ್ಲಾ ಹು ಅಕ್ಬರ್' ಎಂದಿದ್ದರು. ಮುಸ್ಕಾನ್ ಧೈರ್ಯವನ್ನು ಜವಾಹಿರಿ ಟ್ವಿಟರ್​ನಲ್ಲಿ ಕೊಂಡಾಡಿದ್ದ. 'ಭಾರತದಲ್ಲಿ ಯುವತಿಯರು ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಬೇಕು. ಭಾರತದಲ್ಲಿ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಮುಸಲ್ಮಾನರ ಬೇಡಿಕೆಯನ್ನು ಸರ್ಕಾರದಿಂದ ಹತ್ತಿಕ್ಕಲಾಗುತ್ತಿದೆ. ಅದರ ವಿರುದ್ಧ ಮಹಿಳೆಯರು ಮುಸ್ಕಾನ್​ಳ ಮಾದರಿಯಲ್ಲಿ ಸಿಡಿದು ನಿಲ್ಲಬೇಕು' ಎಂದು ಕರೆ ನೀಡಿದ್ದ.

                         ಸೈಫ್ ಅಲ್ ಅದೆಲ್ ನೇತೃತ್ವ?: ಅಲ್ ಜವಾಹಿರಿ ಹತ್ಯೆ ನಂತರ ಅಲ್​ಖೈದಾ ಸಂಘಟನೆ ಶಕ್ತಿ ಸಾಕಷ್ಟು ತಗ್ಗಲಿದೆ. ಈ ಹಿಂದೆ ಲಾಡೆನ್ ಹತ್ಯೆಯ ಬಳಿಕ ಸಂಘಟನೆ ಬಲಗುಂದಿತ್ತು. ಈಜಿಪ್ತ ದೇಶದ ಸೇನಾಧಿಕಾರಿಯಾಗಿದ್ದ ಸೈಫ್ ಅಲ್ ಅದೆಲ್ ಎಂಬಾತ ಅಲ್​ಖೈದಾದ ನೇತೃತ್ವ ವಹಿಸುವ ಸಾಧ್ಯತೆ ಇದೆ. ಆದರೆ, ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಹಲವು ಹೊಸ ಉಗ್ರ ಸಂಘಟನೆಗಳು ವಿವಿಧೆಡೆ ಬಲಗೊಂಡಿರುವ ಹಿನ್ನೆಲೆಯಲ್ಲಿ ಅಲ್​ಖೈದಾ ಎರಡು ದಶಕಗಳ ಹಿಂದಿನ ತನ್ನ ಶಕ್ತಿಯನ್ನು ಮರಳಿ ಪಡೆಯುವುದು ಕಷ್ಟಸಾಧ್ಯ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

                  ತಾಲಿಬಾನ್ ಆಕ್ಷೇಪ: ಅಮೆರಿಕದ ಕಾರ್ಯಾಚರಣೆಯು ಅಂತಾರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾನೆ. ಆದರೆ, ಕಾನೂನಿನ ಆಧಾರದ ಮೇಲೆಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. 2020ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಯಾವುದೇ ಉಗ್ರಗಾಮಿ ಸಂಘಟನೆ ಕಾರ್ಯನಿರ್ವಹಿಸಲು ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ಅಡಳಿತ ಒಪ್ಪಿಕೊಂಡಿತ್ತು. ಆದರೆ, ಜವಾಹಿರಿ ರಾಜಧಾನಿ ಕಾಬೂಲ್​ನಲ್ಲಿ ಮುಕ್ತವಾಗಿಯೇ ವಾಸಿಸುತ್ತಿದ್ದ ಎಂದು ಅಮೆರಿಕ ಪ್ರತಿಪಾದಿಸಿದೆ.

                 ಪಾಕ್​ನಿಂದ ಮಾಹಿತಿ ಸೋರಿಕೆ?: ಜವಾಹಿರಿ ವಾಸಸ್ಥಾನದ ಕುರಿತ ಮಾಹಿತಿಯನ್ನು ಅಮೆರಿಕಕ್ಕೆ ಪಾಕಿಸ್ತಾನವೇ ನೀಡಿರುವ ಸಾಧ್ಯತೆ ಇದೆ ಎಂದು ಜರ್ಮನಿಯಲ್ಲಿ ನೆಲೆಸಿರುವ ಅಫ್ಘಾನಿಸ್ತಾನ ಮೂಲದ ವಿಶ್ಲೇಷಕ ಫಾಹಿಮ್ ಸಾದತ್ ಹೇಳಿದ್ದಾರೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನವು ಐಎಂಎಫ್​ನಿಂದ ನೆರವು ಪಡೆಯುವುದಕ್ಕಾಗಿ ಅಮೆರಿಕದ ಒಲವು ಗಳಿಸಲು ಜವಾಹಿರಿ ವಾಸಸ್ಥಾನದ ಮಾಹಿತಿ ಸೋರಿಕೆ ಮಾಡಿರಬಹುದೆಂದು ಅವರು ಅಂದಾಜಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries