ಬೆಂಗಳೂರು: ರಾಷ್ಟ್ರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವೇಳೆ ಗಡಿನಾಡು ಕಾಸರಗೋಡಿನ ಬಾಲಕಿ ಅಮೃತಾ ಜೋಷಿ ಕೈಗೊಂಡಿರುವ ತಿರಂಗ ಭಾರತ ಯಾತ್ರೆ ಕಾಕತಾಳೀಯವಾದರೂ ವರ್ತಮಾನದಲ್ಲಿ ಅತೀ ಮಹತ್ತರ ಸಾಧನೆಯಾಗಿದೆ. ದೈಹಿಕ ಕ್ಷಮತೆ, ಬೌದ್ದಿಕ ದೃಢತೆ ಮತ್ತು ರಾಷ್ಟ್ರಪ್ರೇಮದ ಈ ಸಾಧನೆ ಅಮೃತ ಜೋಷಿಯವರ ಜೀವನವನ್ನು ಬದಲಿಸಲಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ತಿಳಿಸಿದರು.
ಕಾಸರಗೋಡು ಕುಂಬಳೆಯ ಸೋಲೋ ಬೈಕ್ ರೈಡರ್ ಅಮೃತಾ ಜೋಷಿ ಕೈಗೊಂಡಿರುವ ನಾಲ್ಕು ತಿಂಗಳ ಭಾರತ ಪರ್ಯಟನೆಯ ಭಾಗವಾಗಿ ಮಂಗಳವಾರ ಬೆಂಗಳೂರು ಪ್ರವೇಶಿಸಿದ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಗಡಿಪ್ರದೇಶಾಭಿವೃದ್ದಿ ಪ್ರಾಧಿಕಾರವು ಬೆಂಗಳೂರಿನ ಕಾಸರಗೋಡು ಕನ್ನಡಿಗರ ಸಂಘಟನೆ ವಿಕಾಸ ಟ್ರಸ್ಟ್ ಬೆಂಗಳೂರಿನ ಮಹಾನಗರ ಪಾಲಿಕೆಯ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಅಮೃತಾ ಜೋಷಿಯವರಿಗೆ ತಿರಂಗಾ ಯಾತ್ರೆಗೆ ಸ್ವಾಗತ-ಅಭಿನಂದನೆ ಮತ್ತು ಗಡಿನಾಡ ಕನ್ನಡಿಗರ ಸಾಂಸ್ಕøತಿಕ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಮೃತಾ ಜೋಷಿ ಎರಡೂ ರಾಜ್ಯಗಳ ಸಾಂಸ್ಕøತಿಕ ರಾಯಭಾರಿಯಾಗಿ ಗುರುತಿಸಿಕೊಂಡು ಗಡಿನಾಡಿಗೆ, ಕನ್ನಡ ನಾಡಿಗೆ ಹೆಮ್ಮೆ ಮೂಡಿಸಿದ್ದಾಳೆ. ತಿರಂಗಾದ ಭೂಮಿಕೆಯಲ್ಲಿ ಕೈಗೊಂಡ ಈ ಮಹಾನ್ ಯಾತ್ರೆ ವ್ಯಕ್ತಿಯನ್ನು ಶಕ್ತಿಯಾಗಿ ಅಮೃತಾಳ ಬದುಕಿಗೆ ಹೊಸ ದಿಕ್ಕು ತೋರಿಸುವುದರ ಜೊತೆಗೆ ಪ್ರತಿಯೊಬ್ಬ ದೇಶಪ್ರೇಮಿಗೆ ಅಂತರಂಗದ ರಾಷ್ಟ್ರಪ್ರೇಮದ ಸಂಕೇತವಾಗಿ ಅಚ್ಚುಮೂಡಿಸಿದೆ. ಪ್ರಧಾನಿಗಳ ಮನ್ ಕಿ ಬಾತ್ ನಲ್ಲಿ ಅಮೃತಾಳ ಈ ಸಾಧನೆ ಉಲ್ಲೇಖಗೊಳ್ಳಲಿ ಎಂದು ಡಾ.ಸಿ.ಸೋಮಶೇಖರ್ ಆಶಯ ವ್ಯಕ್ತಪಡಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಆಯುಕ್ತ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಅಮೃತಾಳ ಈ ಯಾತ್ರೆ ರವೀಂದ್ರನಾಥ ಠಾಗೂರರ ವಿಶ್ವ ಮಾನವ ತತ್ವದ ಸನಿಹದ ಕಲ್ಪನೆಯಾಗಿದೆ. ಈಶಾನ್ಯ ಭಾರತದ ಸೆಳೆತ ಆಕೆಯನ್ನು ಭಾರತ ಪೂರ್ತಿ ಸುತ್ತುವ, ವಿವಿಧ ಜನಾಂಗಗಳೊಡನೆ ಬೆರೆಯುವ ಆಸಕ್ತಿ ಮೂಡಿಸಿರುವುದು ಕುತೂಹಲಕಾರಿ ಎಂದರು.
ಆರಿನ್ ಕ್ಯಾಪಿಟಲ್ ಪಾಟ್ರ್ನ್‍ರ್ಸ್ ನ ಅಧ್ಯಕ್ಷ ಟಿ.ವಿ.ಮೋಹನ್ ದಾಸ್ ಪೈ ಮಾತನಾಡಿ ಹೊಸ ಭರವಸೆಯ ಭಾರತಕ್ಕೆ ಅಮೃತಾ ಜೋಷಿಯ ಈ ಸಾಧನೆ ದಾರಿದೀಪ. ಆಧುನಿಕ ಯುವ ಸಮೂಹ ಭಾರತವನ್ನು ಸಮಗ್ರವಾಗಿ ನೋಡುವ ಮೂಲಕ ಏಕತೆ, ದೃಢತೆಗಳ ಪಕ್ವತೆ ಪಡೆಯಬೇಕು. ತನ್ಮೂಲಕ ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಈ ಅನುಭವ ಮಹತ್ತರ ನಿರ್ದೇಶನ ನೀಡುತ್ತದೆ ಎಂದರು.
ವಿಕಾಸ್ ಟ್ರಸ್ಟ್ ನ ಅಧ್ಯಕ್ಷ ರವಿನಾರಾಯಣ ಗುಣಾಜೆ ಮಾತನಾಡಿ, ಗಡಿನಾಡಿನ ಸಮಗ್ರ ಸವಾಲುಗಳ ಮಧ್ಯೆ ಅಮೃತಾಳಂತಹ ಸಾಧಕರು ನಮ್ಮಲ್ಲಿರುವುದು ಕುತೂಹಲದ ಜೊತೆಗೆ ಬಲ ನೀಡುತ್ತದೆ. ಸಂಕೀರ್ಣ ಸ್ಥಿತಿಯಿಂದ ಹೊರಂದು ಹೊಸತನವನ್ನು ಕಂಡುಕೊಳ್ಳುವುದು ಕಾಸರಗೋಡಿನದ್ದೇ ಆದ ವಿಶೇಷತೆಯಾಗಿದ್ದು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭ ಅಮೃತಾಳ ಈ ಸಾಧನೆ ಹೆಮ್ಮೆ ತರಿಸಿದೆ. ಕಾಸರಗೋಡಿನ ಇವರಂತಹ ಸಾಧಕರಿಗೆ ಸದಾ ಬೆಂಬಲವಾಗಿ ವಿಕಾಸ್ ಟ್ರಸ್ಟ್ ಜೊತೆಗಿರುತ್ತದೆ ಎಂದು ಸ್ವಾಗತಿಸಿದರು.
ಅಮೃತಾ ಜೋಷಿ ಅವರನ್ನು ಬೃಹತ್ ಮಂಗಳೂರು ಮಹಾನಗರ ಪಾಲಿಕೆ, ವಿಕಾಸ ಟ್ರಸ್ಟ್‍ಹಾಗೂ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಅಮೃತಾ ಜೋಷಿ ಅವರು, ಈಶಾನ್ಯ ಭಾರತದ ಬಗ್ಗೆ ಅತ್ಯಾಸಕ್ತಳಾಗಿದ್ದ ನನಗೆ ಬಳಿಕ ಭಾರತ ದರ್ಶನಗೈಯ್ಯುವ ಇಚ್ಚೆ ಮೂಡಿಬಂತು. ಸಮಗ್ರ ಭಾರತ ವೈವಿಧ್ಯತೆಯ ಮಧ್ಯೆಯೂ ಏಕತೆಯ ಜಗತ್ತಿನ ಏಕೈಕ ರಾಷ್ಟ್ರವಾಗಿದೆ ಎಂಬುದು ನನ್ನ ಒಟ್ಟು ಅನುಭವವಾಗಿದೆ. ಭಾರತದ ಇತರೆಡೆಗಳ ಜನ, ಜನಾಂಗಗಳ ಬಗ್ಗೆ ನಮಗಿರುವ ತಪ್ಪು ಭಾವನೆಗಳು ದೂರಾಗಬೇಕು. ನಮ್ಮಲ್ಲಿ ಇನ್ನಷ್ಟು ಏಕತೆಮೂಡಬೇಕು. ಗಡಿಗಳ ಕರ್ಮಯೋಗಿ ಸೈನಿಕರ ಬದುಕು ನಿಜವಾಗಿಯೂ ಕಂಡು ಅನುಭವಿಸದೆ ನಮಗರಿವಾಗದು ಎಂದರು. ಕಾಸರಗೋಡಿನ ಸಮಗ್ರ ಜನರಿಗೆ, ಹೆತ್ತವರಿಗೆ, ಸ್ನೇಹಿತರಿಗೆ ನನ್ನೀ ಸಾಧನೆ ಅರ್ಪಿತ ಎಂದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ಎಸ್ ರಂಗಪ್ಪ, ಕರ್ನಾಟಕ ಗಡಿಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೌಕರ ಸಂಘದ ವತಿಯಿಂದ ರೂ.ಒಂದು ಲಕ್ಷ ದ ಚೆಕ್ ಅನ್ನು ಅಮೃತಾಳಿಗೆ ಹಸ್ತಾಂತರಿಸಲಾಯಿತು. ತುಳುವೆರೆ ಚಾವಡಿ, ತುಳುಕೂಟ ಬೆಂಗಳೂರು, ಚಲಚಿತ್ರ ನಟ ಶಿವಧ್ವಜ್, ಗಾಯಕ ರಮೇಶ್ಚಂದ್ರ ಕಾಸರಗೋಡು ಮೊದಲಾದವರು ಪ್ರತ್ಯೇಕವಾಗಿ ಅಭಿನಂದಿಸಿದರು. ಚಲಚಿತ್ರ ನಟ ಧನಂಜಯ ಹಾಗೂ ಮಾಧ್ಯಮ ನಿರೂಪಕಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಗಾಯಕರಾದ ಕಿಕ್ಕೇರಿ ಕೃಷ್ಣಮೂರ್ತಿ ಮತ್ತುಇ ಇತರ ಕಲಾವಿದರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಏನಿದು: ಯಾರೀಕೆ?:
: ಕಾಸರಗೋಡು ಜಿಲ್ಲೆಯ ಕುಂಬಳೆಯ ಕುಮಾರಿ ಅಮೃತಾ ಜೋಶಿ (21 ವರ್ಷ) ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲ ದೇಶದ ಏಕತೆಯನ್ನು ಸಾರಲು ಕಳೆದ 3 ತಿಂಗಳುಗಳಿಂದ ಏಕಾಂಗಿಯಾಗಿ ಬೈಕ್ ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಬಂದಿದ್ದಾರೆ. ಅವರು ನಿನ್ನೆ ಬೆಂಗಳೂರಿಗೆ ಆಗಮಿಸುತ್ತಿದ್ದು, ಈಗಾಗಲೇ ಈಶಾನ್ಯ ಭಾರತ, ಕಾಶ್ಮೀರ ಸೇರಿದಂತೆ ಸುಮಾರು 22,000 ಕಿಲೋ ಮೀಟರ್ ಸಂಚರಿಸಿ ತನ್ನ ಯಾತ್ರೆಯ ಕೊನೆಯ ಭಾಗವಾಗಿ ಬೆಂಗಳೂರು-ಶಿವಮೊಗ್ಗ ಮೂಲಕ ತಮ್ಮೂರು ಕುಂಬಳೆ ತಲುಪಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮಾಹಿತಿ ನೀಡಲಾಯಿತು. ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಹಲವಾರು ಗಣ್ಯರು ಮತ್ತು ನೂರಾರು ಜನರು ತ್ರಿವರ್ಣ ಧ್ವಜಗಳೊಂದಿಗೆ ಗಡಿನಾಡ ಕನ್ನಡತಿ ಸಾಹಸಿ ಯುವತಿಯನ್ನು ಪುಷ್ಪ ವೃಷ್ಠಿಯ ಮೂಲಕ ಸ್ವಾಗತಿಸಿ, ಮೆರವಣಿಗೆ ಮೂಲಕ ಕರೆತಂದರು.







