HEALTH TIPS

ಬಹೂಪಯೋಗಿ ಡ್ರೋನ್‌ ಅಭಿವೃದ್ಧಿಪಡಿಸುತ್ತಿರುವ ಎಚ್‌ಎಎಲ್‌

 

            ನವದೆಹಲಿ: ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಮೇಲೆ ನಿಗಾ ಇಡುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ನೆರವಾಗಬಲ್ಲ ಬಹೂಪಯೋಗಿ ಹಾಗೂ ಪ್ರತಿಕೂಲ ಸನ್ನಿವೇಶದಲ್ಲೂ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಡ್ರೋನ್‌ ಅನ್ನು ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಅಭಿವೃದ್ಧಿಪಡಿಸುತ್ತಿದೆ.

                     ಕ್ಷಿಪಣಿಗಳು ಹಾಗೂ ಸೆನ್ಸಾರ್‌ ಸೇರಿದಂತೆ 40 ಕೆ.ಜಿ ಭಾರದ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನೂ ಇದು ಹೊಂದಿದೆ. ಸೇನೆಯ ಅಗತ್ಯತೆ ಗಮನದಲ್ಲಿಟ್ಟುಕೊಂಡು, ಪರ್ವತ ಶ್ರೇಣಿಗಳು ಹಾಗೂ ಎಲ್‌ಎಸಿ ಮೇಲೆ ನಿಗಾ ಇಡುವುದಕ್ಕೆ ನೆರವಾಗುವ ಉದ್ದೇಶದಿಂದಲೇ ಈ ಡ್ರೋನ್‌ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

                'ಈ ಡ್ರೋನ್‌ನ ಕಾರ್ಯಾಚರಣೆ ವ್ಯವಸ್ಥೆಯು ಕೃತಕ ಬುದ್ದಿಮತ್ತೆಯ ತಂತ್ರಾಂಶವನ್ನು ಒಳಗೊಂಡಿರಲಿದೆ. ಭದ್ರತಾ ಪಡೆಯವರು ಈ ಡ್ರೋನ್‌ ಮೂಲಕ ಅಗತ್ಯ ವಸ್ತುಗಳನ್ನೂ ಸಾಗಣೆ ಮಾಡಬಹುದು' ಎಂದೂ ಮಾಹಿತಿ ನೀಡಿವೆ.

                    'ಎಚ್‌ಎಎಲ್‌ ತಾನು ಅಭಿವೃದ್ಧಿಪಡಿಸಿರುವ ಮಾನವರಹಿತ ವೈಮಾನಿಕ ವಾಹನದ (ಯುಎವಿ) ಚೊಚ್ಚಲ ಪರೀಕ್ಷಾರ್ಥ ಹಾರಾಟವನ್ನು ಮುಂದಿನ ವರ್ಷದ ಮಧ್ಯಂತರದಲ್ಲಿ ನಡೆಸಲು ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಇಂತಹ 60 ವಾಹನ‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನೂ ಹೊಂದಿದೆ' ಎಂದೂ ತಿಳಿಸಿವೆ.

                  'ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರಿಯ ಸಹಭಾಗಿತ್ವದಲ್ಲಿ ಹೆರಾನ್‌ ಟಿಪಿ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯೊಂದನ್ನೂ ಎಚ್‌ಎಎಲ್‌ ಹೊಂದಿದೆ. ಭಾರತೀಯ ಸೇನೆಗೆ ಅಗತ್ಯವಿರುವಷ್ಟು ಡ್ರೋನ್‌ಗಳನ್ನು ಸಿದ್ಧಪಡಿಸುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಅವುಗಳನ್ನು ರಫ್ತು ಮಾಡುವ ಆಲೋಚನೆಯನ್ನೂ ಸಂಸ್ಥೆ ಹೊಂದಿದೆ' ಎಂದು ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

                    'ಮಧ್ಯಮ ಎತ್ತರದ ಹೆರಾನ್‌ ಡ್ರೋನ್‌ಗಳು 35 ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಬಲ್ಲ ಹಾಗೂ ಸುಮಾರು 45 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿರಲಿವೆ. ಹೆರಾನ್‌ ಟಿಪಿ ಡ್ರೋನ್‌ಗಳು ಸ್ವಯಂಚಾಲಿತ ಟ್ಯಾಕ್ಸಿ ಟೇಕಾಫ್‌ ಆಯಂಡ್‌ ಲ್ಯಾಂಡಿಂಗ್‌ (ಎಟಿಒಎಲ್‌) ಹಾಗೂ ಉಪಗ್ರಹ ಸಂವಹನ ತಂತ್ರಜ್ಞಾನವನ್ನು ಒಳಗೊಂಡಿರಲಿವೆ' ಎಂದೂ ಮಾಹಿತಿ ನೀಡಿದ್ದಾರೆ.

              ಡ್ರೋನ್‌ ತಯಾರಿಕೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಯೋಜನೆಗಳಲ್ಲಿ ಎಚ್‌ಎಎಲ್‌, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಜೊತೆಗೂಡಿ ಕೆಲಸ ಮಾಡುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries