ನವದೆಹಲಿ: ರಾಜ್ಯಮಟ್ಟದಲ್ಲಿ ಹಿಂದೂಗಳು ಸೇರಿದಂತೆ ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರುತಿಸುವ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಭೆ ನಡೆಸಲು ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ಹೆಚ್ಚಿನ ಕಾಲಾವಕಾಶವನ್ನು ಕೋರಿದೆ.
ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ್ ಅವರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ರಾಜ್ಯಗಳ ಹೇಳಿಕೆಗಳನ್ನು ಪಡೆದಿಲ್ಲ ಎಂಬುದಾಗಿ ತಿಳಿಸಿದೆ.
'ಈ ರಾಜ್ಯಗಳಿಗೆ ತಮ್ಮ ಹೇಳಿಕೆಗಳು, ವಿಶ್ಲೇಷಣೆಗಳನ್ನು ಸಲ್ಲಿಸುವಂತೆ ಜ್ಞಾಪಿಸಲಾಗುವುದು. ಅಂತೆಯೇ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಉತ್ತರಪ್ರದೇಶದಿಂದಲೂ ಹೇಳಿಕೆಗಳನ್ನು ಸ್ವೀಕರಿಸಲಾಗಿಲ್ಲ. ಈ ಸಮಸ್ಯೆಯ ಕುರಿತಾಗಿ ಈ ರಾಜ್ಯಗಳಲ್ಲಿ ವ್ಯಾಪಕವಾದ ಪರಿಣಾಮಗಳಾಗುವ ಸಾಧ್ಯತೆಗಳಿವೆ. ಈ ವಿಷಯದಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸುವ ಕುರಿತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮುಂಬರುವ ವಾರಗಳಲ್ಲಿ ಸಭೆ ನಡೆಸಲಾಗುವುದು' ಎಂದೂ ಕೇಂದ್ರವು ಹೇಳಿದೆ.
ಸಭೆಗಳನ್ನು ನಡೆಸುವ ಸಲುವಾಗಿ ನ್ಯಾಯಾಲಯವು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೇಂದ್ರ ಸರ್ಕಾರವು ಮನವಿ ಮಾಡಿತು ಎಂದು ಸಚಿವಾಲಯವು ಮಾಹಿತಿ ನೀಡಿದೆ.
ವಕೀಲರಾದ ಅಶ್ವನಿ ಕುಮಾರ್ ದುಬೆ ಅವರ ಮೂಲಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತು.
ರಾಜ್ಯಮಟ್ಟದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರನ್ನು ಗುರುತಿಸುವ ವಿಷಯದಲ್ಲಿ ಕೇಂದ್ರವು ವಿಭಿನ್ನ ನಿಲುವುಗಳನ್ನು ತೆಗೆದುಕೊಳ್ಳುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವಿಷಯದ ಬಗ್ಗೆ ಮೂರು ತಿಂಗಳೊಳಗೆ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುವಂತೆಯೂ ಸೂಚನೆ ನೀಡಿತ್ತು.





