HEALTH TIPS

ಸೌಟ್ಸ್-ಗೈಡ್ಸ್‍ನಿಂದ ಸಿದ್ಧವಾಗಿದೆ ಸ್ನೇಹಭವನ: ಇಂದು ಗೃಹಪ್ರವೇಶ


               ಮಂಜೇಶ್ವರ: ಮಕ್ಕಳ ಓದು ಬರಹದ ಜತೆಗೆ ನಿಸರ್ಗದ ಮಡಿಲಲ್ಲಿ ಒಂದಾಗಿ ಸಮನ್ವಯದಿಂದ ಬಾಳಲು ಕಲಿಯುವಂತೆ ಪ್ರೇರೇಪಿಸುವ ಸ್ವ-ಇಚ್ಛಿತ, ಜಾತ್ಯತೀತ, ರಾಜಕೀಯೇತರ ಚಳುವಳಿಯಾದ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳ ಬೌದ್ಧಿಕ-ಸಾಮಾಜಿಕ ಅಭಿವೃದ್ಧಿಯಲ್ಲಿ ಬಹುದೊಡ್ಡ ಮೈಲುಗಲ್ಲಾಗಿ ಪರಿಣಮಿಸಿದೆ. ಬಹಳ ಹಿಂದಿನಿಂದಲೇ ಜನಮೆಚ್ಚುಗೆ ಪಡೆದಿರುವಂತಹ ಈ ಸಂಸ್ಥೆಯು ಇಂದಿಗೂ ಅನೇಕ ಪ್ರಗತಿಪರ ಚಟುವಟಿಕೆಗಳನ್ನು ನಿರ್ವಹಿಸುತ್ತಲಿದೆ. ಅದರಲ್ಲಿ ಇತ್ತೀಚೆಗೆ ಹೊಸದಾಗಿ ಆರಂಭಗೊಂಡ ವಿದ್ಯಾರ್ಥಿಗೆ ಸ್ನೇಹಭವನ ನಿರ್ಮಾಣ ಯೋಜನೆಯೂ ಒಂದಾಗಿದೆ. ಜಿಲ್ಲೆಯ ವಿವಿಧ ಶಿಕ್ಷಣ ಉಪಜಿಲ್ಲೆಗಳ ಸ್ಕೌಟ್ಸ್ ಆಂಡ್ ಗೈಡ್ಸ್ ಪ್ರಾದೇಶಿಕ ಸಂಘಟನೆಗಳು ಆಯ್ದ ಬಡ ವಿದ್ಯಾರ್ಥಿಗೆ ಮನೆನಿರ್ಮಿಸಿ ನೀಡುವ ಯೋಜನೆಯಾಗಿದೆ ಸ್ನೇಹಭವನ.
          ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಮಂಜೇಶ್ವರ ಸ್ಥಳೀಯ ಸಂಘಟನೆಯ ವಿಷನ್ 2021-26ರ ಸ್ನೇಹಭವನ ಯೋಜನೆಯ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಗೆ ನಿರ್ಮಿಸಿ ನೀಡಿದ ಮನೆಯ ಗೃಹಪ್ರವೇಶ ಆ. 20ರಂದು ಬೆಳಿಗ್ಗೆ 9:10-10:12ರ ಶುಭಮುಹೂರ್ತದಲ್ಲಿ ಮಂಗಲ್ಪಾಡಿ ಪ್ರತಾಪ ನಗರದಲ್ಲಿ ನಡೆಯಲಿದೆ. ಐಲ ಶ್ರೀ ಶಾರದಾ ಎಯುಪಿ ಶಾಲೆಯ ಶಮಿಕಾ ಎಂಬ ವಿದ್ಯಾರ್ಥಿನಿಗೆ ಸ್ನೇಹಭವನವನ್ನು ನಿರ್ಮಿಸಿ ನೀಡಲಾಗಿದೆ. ಈಕೆ ಸೋಮಪ್ಪ ಬೆಳ್ಚಾಡ ಪ್ರತಾಪನಗರ ಅವರ ಪುತ್ರಿ.
          ಈ ನಿಟ್ಟಿನಲ್ಲಿ ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಮಂಜೇಶ್ವರ ಪ್ರಾದೇಶಿಕ ಸಂಘಟನೆಯು ಕಳೆದ ಒಂದು ವರ್ಷದಿಂದ ಅವಿರತ ಪ್ರಯತ್ನ ನಡೆಸುತ್ತಲೇ ಬಂದಿದೆ. ವಿವಿಧ ನಿಬಂಧನೆಗಳ ಆಧಾರದಲ್ಲಿ ಫಲಾನುಭವಿಯ ಆಯ್ಕೆ ನಡೆಯಿತು. ಕಳೆದ ಡಿಸೆಂಬರ್ 1ರಂದು ವಿಷನ್ 2021-26ರ ಸ್ನೇಹಭವನ ಯೋಜನೆಯ ಪ್ರಾದೇಶಿಕ ಸಮಿತಿಯನ್ನು ರಚಿಸಲಾಗಿತ್ತು. ಐಲ ಶ್ರೀ ಶಾರದಾ ಬೋವಿ ಎಯುಪಿ ಶಾಲೆಯಲ್ಲಿ ಸಭೆ ನಡೆದಿತ್ತು. ಬಳಿಕ ಫಲಾನುಭವಿಯ ಮನೆಯಲ್ಲಿ ಕಟ್ಟಡ ಸಮಿತಿಯು ರಚನೆಗೊಂಡಿತ್ತು. ಪುರುಷೋತ್ತಮ ಪ್ರತಾಪನಗರ ಸಮಿತಿಯ ಸಂಚಾಲಕರಾಗಿ ನೇಮಕಗೊಂಡಿದ್ದರು.
         ಬಳಿಕ ಫೆ. 10ರಂದು ಸ್ನೇಹಭವನದ ಶಿಲಾನ್ಯಾಸ ಕಾರ್ಯಕ್ರಮ ನಡೆದಿತ್ತು.  ಮಂಜೇಶ್ವರ ಶಾಸಕ ಎ. ಕೆ. ಎಂ. ಅಶ್ರಫ್ ನೇತೃತ್ವ ನೀಡಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ., ಜಿಲ್ಲಾ ಪಂಚಾಯಿತಿಸದಸ್ಯ ಗೋಲ್ಡನ್ ರಹ್ಮಾನ್, ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಮತ್ತಿತರರು ಇದ್ದರು.
ಪ್ರತಾಪ ನಗರದ ಗ್ರಾಮ ವಿಕಾಸ ಸಮಿತಿ, ಶ್ರೀ ಸದಾಶಿವ ಕಲಾವೃಂದ ಚೆರುಗೋಳಿ-ಅಂಬಾರು, ಸೇವಾ ಭಾರತಿ, ಮಂಜೇಶ್ವರ ಎಸ್‍ವಿಟಿ ಶಾಲೆಯ ರಾಷ್ಟ್ರಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ಸ್ನೇಹಭವನ ನಿರ್ಮಾಣ ಕೆಲಸಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ. ಮಾತ್ರವಲ್ಲದೆ ಅಧ್ಯಾಪಕ ಸಂಘಟನೆಗಳು, ಮಂಜೇಶ್ವರ ಉಪಜಿಲ್ಲೆಯ ಅಧ್ಯಾಪಕರುಗಳು ಮೊದಲಾದವರ ಸಹಾಯಹಸ್ತದಿಂದ ಯೋಜನೆಯು ಸಾಫಲ್ಯದ ಕಡೆಗೆ ಮುಖ ಮಾಡಿತು. ಎಇಒ ದಿನೇಶ್ ವಿ. ಯೋಜನೆಯ ಮೇಲ್ನೋಟವನ್ನು ವಹಿಸುತ್ತಲೇ ಬಂದಿದ್ದಾರೆ.  ಮಂಜೇಶ್ವರ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಆದಿನಾರಾಯಣ ಭಟ್, ಗೈಡ್‍ನ ಜಿಲ್ಲಾ ಕಮೀಷನರ್ ಶ್ರೀಕುಮಾರಿ ಟೀಚರ್, ಕಾರ್ಯದರ್ಶಿ ಶಿವಪ್ರಸಾದ್ ಸಹಾಯ-ಸಹಕಾರಗಳನ್ನು ನೀಡಿದ್ದಾರೆ.
          ಇವರೆಲ್ಲರ ನೆರವಿನ ಹಸ್ತದಿಂದ ಏಳು ಲಕ್ಷ ರೂ. ವೆಚ್ಚದಲ್ಲಿ ಮನೆಯ ನಿರ್ಮಾಣ ಪೂರ್ತಿಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ನಿರ್ಮಾಣಗೊಂಡ ಮೂರು ಸ್ನೇಹಭವನಗಳ ಬೀಗದಕೀಲಿ ಹಸ್ತಾಂತರ ಕಾರ್ಯಕ್ರಮವನ್ನು ಜೂ. 20ರಂದು ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಹಣಕಾಸು ಸಚಿವ ಕೆ. ಎನ್. ಬಾಲಗೋಪಾಲನ್ ನೆರವೇರಿಸಿದ್ದರು. ಅಧಿಕೃತವಾಗಿ ಮನೆಯ ಗೃಹಪ್ರವೇಶ ಕಾರ್ಯಕ್ರಮ ಆ. 20ರಂದು ನಡೆಯಲಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries