ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ ಮಟ್ಟದ ºಸಿರುಸೇನಾ ಸಂಗಮ ಮಂಗಳವಾರ ನಡೆಯಿತು. ಪರಿಸರವನ್ನು ಕಸಮುಕ್ತಗೊಳಿಸುವ ಉದ್ದೇಶದೊಂದಿದೆ ಜಾರಿಗೆ ತಂದಿರುವ ಹಸಿರು ಕೇರಳ ಕಾರ್ಯಕ್ರಮದ ಅಂಗವಾಗಿ ಈ ಸಮಾರಂಭ ನಡೆಯಿತು.
ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಎಲ್ಲ 7 ಗ್ರಾ.ಪಂ.ಗಳಲ್ಲಿ ಅಜೈವಿಕ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಹಾಗೂ ಹಸಿರು ಕ್ರಿಯಾ ಸೇನೆಗೆ ಉತ್ತೇಜನ ನೀಡಲು ಹಸಿರು ಸೇನೆಯ ಸದಸ್ಯರ ಸಹಭಾಗಿತ್ವದಲ್ಲಿ ಬ್ಲಾಕ್ ಮಟ್ಟದ ಹಸಿರು ಸೇನಾ ಸಂಗಮ ನಡೆಯಿತು. ಸಮಾರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಸಿರುಕ್ರಿಯಾ ಸೇನೆಗೆ ಪ್ರಶಸ್ತಿ ನೀಡಲಾಯಿತು.
ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಪಿ.ಕೆ.ಹನೀಫ್ ಉದ್ಘಾಟಿಸಿದರು. ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ಎ.ಶಂಸೀನ ಅಧ್ಯಕ್ಷತೆ ವಹಿಸಿದ್ದರು. ನೈರ್ಮಲ್ಯ ಮಿಷನ್ ಸಂಯೋಜಕಿ ಎ.ಲಕ್ಷ್ಮಿ ವರದಿ ಮಂಡಿಸಿದರು.
ಪಂಚಾಯಿತಿ ಅಧ್ಯಕ್ಷರು, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು, ಬ್ಲಾಕ್ ಪಂಚಾಯಿತಿ ಸದಸ್ಯರು ಹಾಗೂ ನವಕೇರಳ ಕ್ರಿಯಾಯೋಜನೆ ಜಿಲ್ಲಾ ಮಿಷನ್ ಸಂಯೋಜಕ ಕೆ.ಬಾಲಕೃಷ್ಣನ್ ಮಾತನಾಡಿದರು. ಬ್ಲಾಕ್ ಪಂಚಾಯತಿ ನವ ಕೇರಳ ಸಂಯೋಜಕ ಕ್ರೋಢೀಕರಿಸಿದರು. ಹಸಿರು ಕ್ರಿಯಾಸೇನೆಯ ಅತ್ಯುತ್ತಮ ಪ್ರದರ್ಶನಕ್ಕಾಗಿ ಮೀಂಜ ಗ್ರಾಮ ಪಂಚಾಯತಿ ಪ್ರಥಮ ಸ್ಥಾನ ಗಳಿಸಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ದ್ವಿತೀಯ ಸ್ಥಾನ ಹಾಗೂ ಪೈವಳಿಕೆ ಗ್ರಾಮ ಪಂಚಾಯಿತಿ ತೃತೀಯ ಸ್ಥಾನ ಪಡೆಯಿತು. ಈ ಸಂದರ್ಭದಲ್ಲಿ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದರು. ಬ್ಲಾಕ್ ಪಂಚಾಯಿತಿ ಕಾರ್ಯದರ್ಶಿ ಶೀತಲ ಸ್ವಾಗತಿಸಿ, ಗ್ರಾಮ ವಿಸ್ತರಣಾಧಿಕಾರಿ ಸುಜಿತ್ ವಂದಿಸಿದರು.




.jpeg)
