ನವದೆಹಲಿ :ಟಿವಿ ಮತ್ತು ವೆಬ್ ಸರಣಿಗಳ ನಿರ್ಮಾಪಕಿ ಏಕ್ತಾ ಕಪೂರ್(Ekta Kapoor) ಅವರನ್ನು ಶುಕ್ರವಾರ ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲ(Supreme Court)ಯವು,ಅವರು ಯುವಪೀಳಿಗೆಯ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿತು.
ವೆಬ್ ಸರಣಿ xxx ಕುರಿತು ತನ್ನ ವಿರುದ್ಧದ ಬಂಧನ ವಾರಂಟ್ ಗಳನ್ನು ಪ್ರಶ್ನಿಸಿ ಕಪೂರ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ಕಳೆದ ತಿಂಗಳು ಬಿಹಾರದ ನ್ಯಾಯಾಲಯವೊಂದು ಯೋಧರನ್ನು ಅವಮಾನಿಸಿದ್ದ ಮತ್ತು ಅವರ ಕುಟುಂಬಗಳ ಭಾವನೆಗಳಿಗೆ ನೋವನ್ನುಂಟು ಮಾಡಿದ್ದ ಆರೋಪಗಳಲ್ಲಿ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್(Shobha Kapoor) ವಿರುದ್ಧ ಬಂಧನ ವಾರಂಟ್ ಅನ್ನು ಹೊರಡಿಸಿತ್ತು. ವೆಬ್ ಸರಣಿಯನ್ನು ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್(Balaji Telefilms) ಒಡೆತನದ ಎಎಲ್ಟಿ ಬಾಲಾಜಿ ಒಟಿಟಿಯಲ್ಲಿ ಪ್ರಸಾರಿಸಲಾಗಿತ್ತು. ಶೋಭಾ ಕಪೂರ್ ಬಾಲಾಜಿ ಟೆಲಿ ಫಿಲ್ಮ್ಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಏನಾದರೂ ಮಾಡಬೇಕಿದೆ ಎಂದು ಶುಕ್ರವಾರ ವಿಚಾರಣೆ ಸಂದರ್ಭ ಹೇಳಿದ ನ್ಯಾಯಮೂರ್ತಿಗಳಾದ ಅಜಯ ರಸ್ತೋಗಿ ಮತ್ತು ಸಿ.ಟಿ.ರವಿಕುಮಾರ ಅವರ ಪೀಠವು,ಒಟಿಟಿ ಕಂಟೆಂಟ್ ಈಗ ಎಲ್ಲರಿಗೂ ಲಭ್ಯವಿದೆ. ನೀವು ಜನರಿಗೆ ಯಾವ ರೀತಿಯ ಆಯ್ಕೆಯನ್ನು ಒದಗಿಸುತ್ತಿದ್ದೀರಿ ಎಂದು ಪ್ರಶ್ನಿಸಿತು.
ಒಟಿಟಿ ವೇದಿಕೆಗಳಲ್ಲಿಯ ಕಂಟೆಂಟ್ ಚಂದಾದಾರಿಕೆಯ ಆಧಾರದಲ್ಲಿ ಬಳಕೆದಾರರಿಗೆ ಲಭ್ಯವಿದೆ ಮತ್ತು ಈ ದೇಶದಲ್ಲಿ ಆಯ್ಕೆಯ ಸ್ವಾತಂತ್ರವಿದೆ ಎಂದು ಕಪೂರ್ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ವಾದಿಸಿದರು.
ಆದಾಗ್ಯೂ ವೀಕ್ಷಕರಿಗೆ ಯಾವ ರೀತಿಯ ಆಯ್ಕೆಯನ್ನು ನೀಡಲಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಧೀಶರು,ಪ್ರತಿ ಸಲವೂ ನೀವು ಈ ನ್ಯಾಯಾಲಯಕ್ಕೆ ಬರುತ್ತೀರಿ,ನಾವು ಇದನ್ನು ಮೆಚ್ಚುವುದಿಲ್ಲ ಎಂದು ಹೇಳಿದರು.
'ಇಂತಹ ಅರ್ಜಿಯನ್ನು ಸಲ್ಲಿಸಿದ್ದಕ್ಕಾಗಿ ನಾವು ನಿಮಗೆ ದಂಡ ವಿಧಿಸುತ್ತೇವೆ. ರೋಹಟ್ಗಿಯವರೇ,ಇದನ್ನು ನಿಮ್ಮ ಕಕ್ಷಿದಾರರಿಗೆ ತಿಳಿಸಿ' ಎಂದು ಪೀಠವು ಹೇಳಿತು.





