ಕೋಲ್ಕತ್ತ: '2022ರ ಗೂಗಲ್ ಡೂಡಲ್ ಸ್ಪರ್ಧೆ'ಯ ವಿಜೇತರ ಹೆಸರನ್ನು ಸೋಮವಾರ ಗೂಗಲ್ ಘೋಷಿಸಿದೆ. ಕೋಲ್ಕತ್ತಾದ ವಿದ್ಯಾರ್ಥಿ ಶ್ಲೋಕ್ ಮುಖರ್ಜಿ ವಿಜೇತರಾಗಿದ್ದು, Google.co.in ನಲ್ಲಿ ಶ್ಲೋಕ್‌ನ ಡೂಡಲ್ 24 ಗಂಟೆ ಕಾಲ ಕಾಣಿಸಲಿದೆ.
ಈ ವರ್ಷದ ಗೂಗಲ್ ಡೂಡಲ್ ಸ್ಪರ್ಧೆಯಲ್ಲಿ 'ಮುಂದಿನ 25 ವರ್ಷಗಳಲ್ಲಿ, ನನ್ನ ಭಾರತವು…' ವಿಷಯ ಕುರಿತು ಡೂಡಲ್ ಚಿತ್ರಿಸಲು ಗೂಗಲ್ ಆಹ್ವಾನಿಸಿತ್ತು. ಭಾರತದಾದ್ಯಂತ 100ಕ್ಕೂ ಹೆಚ್ಚು ನಗರಗಳಿಂದ 1ರಿಂದ 10ನೇ ತರಗತಿಯ 1,15,000 ಮಕ್ಕಳು ಭಾಗವಹಿಸಿದ್ದರು. ಈ ಪೈಕಿ ಕೋಲ್ಕತ್ತಾದ ಶ್ಲೋಕ್ ಮುಖರ್ಜಿ ರಚಿಸಿದ್ದ 'ಇಂಡಿಯಾ ಆನ್ ದಿ ಸೆಂಟರ್ ಸ್ಟೇಜ್' ಎಂಬ ಸ್ಫೂರ್ತಿದಾಯಕ ಡೂಡಲ್ಗೆ ಪ್ರಶಸ್ತಿ ಒಲಿದಿದೆ.
'ಮುಂದಿನ 25 ವರ್ಷಗಳಲ್ಲಿ, ನನ್ನ ಭಾರತವು ಮಾನವೀಯತೆಯ ಸುಧಾರಣೆಗಾಗಿ ತನ್ನೇದೇ ಆದ ಪರಿಸರ ಸ್ನೇಹಿ ರೋಬೋಟ್ ಅನ್ನು ಅಭಿವೃದ್ಧಿ ಪಡಿಸುತ್ತದೆ. ಭಾರತವು ಭೂಮಿಯಿಂದ ಬಾಹ್ಯಾಕಾಶಕ್ಕೆ ನಿಯಮಿತವಾಗಿ ಇಂಟರ್ ಗ್ಯಾಲಕ್ಟಿಕ್ ಪ್ರಯಾಣ ಹೊಂದಿರುತ್ತದೆ. ಭಾರತವು ಯೋಗ ಮತ್ತು ಆಯುರ್ವೇದದಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತದೆ. ಮತ್ತು ಮುಂಬರುವ ವರ್ಷಗಳಲ್ಲಿ ಬಲಗೊಳ್ಳುತ್ತದೆ.' ಎಂದು ಶ್ಲೋಕ್ ಮುಖರ್ಜಿ ಡೂಡಲ್ನಲ್ಲಿ ಚಿತ್ರಿಸಿದ್ದಾರೆ.
'ಮುಂದಿನ 25 ವರ್ಷಗಳಲ್ಲಿ, ನನ್ನ ಭಾರತವು…' ಕುರಿತು ಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮದೇ ಚಿಂತನಾ ಲಹರಿಯಲ್ಲಿ ವಿಭಿನ್ನ ರೀತಿಯ ಡೂಡಲ್ ರಚಿಸಿದ್ದರು. ಮಕ್ಕಳ ಸೃಜನಶೀಲತೆ ಮತ್ತು ಕಲ್ಪನೆಗೆ ಸ್ವತಃ ಗೂಗಲ್ನವರೇ ಮಾರುಹೋಗಿದ್ದಾರೆ. ತೀರ್ಪುಗಾರರೂ ಇದಕ್ಕೆ ಹೊರತಾಗಿಲ್ಲ. ರಾಷ್ಟ್ರದಾದ್ಯಂತ 20 ಡೂಡಲ್ಗಳನ್ನು ಆಯ್ಕೆ ಮಾಡಿ ಸಾರ್ವಜನಿಕ ಮತದಾನಕ್ಕಾಗಿ ಆನ್‌ಲೈನ್‌ನಲ್ಲಿ ಪ್ರದರ್ಶಿಸಲಾಗಿತ್ತು. ಅಂತಿಮವಾಗಿ ರಾಷ್ಟ್ರಮಟ್ಟದ ವಿಜೇತರಾಗಿ ಶ್ಲೋಕ್ ಮುಖರ್ಜಿ ಆಯ್ಕೆಯಾದರು. 4 ಗುಂಪಿನ ವಿಜೇತರನ್ನೂ ಆಯ್ಕೆ ಮಾಡಲಾಯಿತು.
ಗೂಗಲ್ ಡೂಡಲ್ ಸ್ಪರ್ಧೆಯು ಸೃಜನಶೀಲತೆ ಪ್ರೋತ್ಸಾಹಿಸಲು ಮತ್ತು ಯುವಜನರಲ್ಲಿ ಕಲ್ಪನಾಶಕ್ತಿ ವೃದ್ಧಿಸುವ ಗುರಿಯನ್ನು ಹೊಂದಿದೆ ಎಂದು ಗೂಗಲ್ ತಿಳಿಸಿದೆ. ಟಿಂಕಲ್ ಕಾಮಿಕ್ಸ್‌ನ ಪ್ರಧಾನ ಸಂಪಾದಕರಾದ ನೀನಾ ಗುಪ್ತಾ ಸೇರಿದಂತೆ ಸಿನಿಮಾ ನಿರ್ಮಾಪಕರು, ನಿದೇಶಕರು, ನಟ-ನಟಿಯರು, ಗೂಗಲ್ ಸಿಬ್ಬಂದಿ ಸೇರಿ ಹಲವರು ತೀರ್ಪುಗಾರರ ಸಮಿತಿಯಲ್ಲಿದ್ದರು.





