ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಆರು ಹಂತಕರ ಅವಧಿ ಪೂರ್ವ ಬಿಡುಗಡೆ ಮಾಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಕೋರಲಿದೆ ಎಂದು ಪಕ್ಷದ ಹಿರಿಯ ನಾಯಕ ಮತ್ತು ವಕೀಲ ಅಭಿಷೇಕ್ ಮನು ಸಿಂಗ್ವಿ ಸೋಮವಾರ ತಿಳಿಸಿದರು.
ಕೇಂದ್ರ ಸರ್ಕಾರ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯಲ್ಲಿ ಮಧ್ಯ ಪ್ರವೇಶಿಸಬೇಕಾ ಆಥವಾ ಬೇರೆ ಯಾವ ವಿಧಾನ ಅನುಸರಿಸಬೇಕು ಎಂಬುದರ ಕುರಿತು ಸದ್ಯದಲ್ಲಿಯೇ ಪಕ್ಷ ನಿರ್ಧರಿಸಲಿದೆ ಎಂದು ಅವರು ಸುದ್ದಿ ಸಂಸ್ಥೆಗೆ ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸಲು ಪಕ್ಷ ತಾತ್ವಿಕವಾಗಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ನಿಂದ ವ್ಯಾಪಕ ಟೀಕೆಗಳು ವ್ಯಕ್ತವಾದ ಕಾರಣ, ಕೇಂದ್ರ ಸರ್ಕಾರ ಕಳೆದ ವಾರ ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ನಳಿನಿ ಶ್ರೀಹರನ್, ಆರ್.ಪಿ. ರವಿಚಂದ್ರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಜಯಕುಮಾರ್ ಅವರ ಅವಧಿ ಪೂರ್ವ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನವೆಂಬರ್ 11ರಂದು ಆದೇಶಿಸಿತ್ತು.