ಕೋಲ್ಕತ್ತ : 'ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಹಲವು ದೇಶಗಳು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ವ್ಯಾಪಾರ, ಸಾಲ ಮತ್ತು ಪ್ರವಾಸೋದ್ಯಮ ಸೇರಿ ಎಲ್ಲ ವಿಚಾರಗಳನ್ನೂ ಆಯುಧಗಳಂತೆ ಬಳಸಿ, ಒತ್ತಡ ತಂತ್ರ ಅನುಸರಿಸಲಾಗುತ್ತಿದೆ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅಭಿಪ್ರಾಯಪಟ್ಟರು.
ಐಐಎಂ ಕೋಲ್ಕತ್ತದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಜಾಗತೀಕರಣದ ರಾಜಕೀಯ ಪರಿಣಾಮ ತಿರುಗುಬಾಣವೂ ಆಗುತ್ತಿದೆ. ಸ್ವಾಯತ್ತೆಯ ಹಿತಾಸಕ್ತಿಗಳು ನವೀಕರಣಗೊಳ್ಳುತ್ತಿವೆ' ಎಂದು ರಷ್ಯಾ-ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ. ಈಗ ಉಕ್ರೇನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಇನ್ನಷ್ಟು ಅನಿಶ್ಚಿತ ಸ್ಥಿತಿ ಹಾಗೂ ಅಸ್ತಿತ್ವದ ಅಸುರಕ್ಷೆ ಭಾವ ಕಾಡತೊಡಗಿದೆ ಎಂದರು.
'ಈ ಎಲ್ಲಾ ಕಾರಣಗಳಿಂದ ಚದುರಿಹೋಗುತ್ತಿರುವ ಜಗತ್ತನ್ನು, ಭಾರತ ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ. ಕ್ವಾಡ್, ಐ2ಯು2 ಅಥವಾ ಅಂತರರಾಷ್ಟ್ರೀಯ ಸೌರ ಮೈತ್ರಿಗಳಂಥ ಕ್ರಮಗಳ ಮೂಲಕ ಭಾರತ ಉತ್ತಮ ಕೆಲಸ ಮಾಡುತ್ತಿದೆ' ಎಂದರು.


