ನವದೆಹಲಿ:ತನಿಖಾ ಸಂಸ್ಥೆಗೆ ತಮ್ಮ ವಿದ್ಯುನ್ಮಾನ ಸಾಧನಗಳ ಪಾಸ್ ವರ್ಡ್(Password) ಗಳನ್ನು ಒದಗಿಸುವಂತೆ ಕ್ರಿಮಿನಲ್ ಪ್ರಕರಣಗಳಲ್ಲಿಯ ಆರೋಪಿಗಳನ್ನು ಒತ್ತಾಯಿಸುವಂತಿಲ್ಲ ಎಂದು ದಿಲ್ಲಿಯ ವಿಶೇಷ ಸಿಬಿಐ(CBI) ನ್ಯಾಯಾಲಯವು ಎತ್ತಿ ಹಿಡಿದಿದೆ.
ಪಾಸ್ ವರ್ಡ್ ನೀಡುವಂತೆ ಆರೋಪಿಯನ್ನು ಬಲವಂತಗೊಳಿಸುವುದು ಸಂವಿಧಾನದ ವಿಧಿ 20(3)ನ್ನು ಉಲ್ಲಂಘಿಸುತ್ತದೆ ಎಂದು ವಿಶೇಷ ನ್ಯಾಯಾಧೀಶ ನರೇಶ್ ಕುಮಾರ್ ಲಾಕಾ(Naresh Kumar Laka)ಹೇಳಿದರು.
ಈ ವಿಧಿಯು ಸ್ವಯಂ-ದೋಷಾರೋಪಣೆಯ ವಿರುದ್ಧದ ಹಕ್ಕಿಗೆ ಸಂಬಂಧಿಸಿದೆ.
ತನ್ನ ಕಂಪ್ಯೂಟರ್ ನ ಯೂಸರ್ ಐಡಿ (User ID)ಮತ್ತು ಪಾಸ್ ವರ್ಡ್
(Password)ಒದಗಿಸುವಂತೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಮಹೇಶ್ ಕುಮಾರ್ ಶರ್ಮಾಗೆ
ನಿರ್ದೇಶನ ನೀಡುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ
ತೀರ್ಪನ್ನು ನೀಡಿದೆ.
ಪಾಸ್ ವರ್ಡ್ ಗಳನ್ನು ನೀಡುವಂತೆ ತನಿಖಾ ಸಂಸ್ಥೆಯು ಆರೋಪಿಯನ್ನು ಬಲವಂತಗೊಳಿಸಲು ಸಾಧ್ಯವಿಲ್ಲವಾದರೂ ತನಿಖಾಧಿಕಾರಿಯೋರ್ವರು ಆರೋಪಿಗೆ ಡಾಟಾ ನಷ್ಟವಾಗುವ ಅಪಾಯದೊಂದಿಗೆ ಪರಿಣಿತ ಸಂಸ್ಥೆ ಅಥವಾ ವ್ಯಕ್ತಿಯ ನೆರವಿನಿಂದ ಕಂಪ್ಯೂಟರ್(Computer) ನಲ್ಲಿಯ ಡಾಟಾಗಳನ್ನು ಪ್ರವೇಶಿಸಬಹುದು ಎಂದು ನ್ಯಾ.ಲಾಕಾ ಹೇಳಿದರು.
ಪಾಸ್ ವರ್ಡ್ ಗಳು ಮತ್ತು ಬಯೋ ಮೆಟ್ರಿಕ್ ಗಳು ಒಂದೇ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ಹಿಂದಿನ ತೀರ್ಪೊಂದರಲ್ಲಿ ಎತ್ತಿ ಹಿಡಿದಿದೆಯಾದರೂ,ಇತ್ತೀಚಿಗೆ ಜಾರಿಗೊಂಡಿರುವ ಅಪರಾಧ ಪ್ರಕ್ರಿಯೆ (ಗುರುತಿಸುವಿಕೆ) ಕಾಯ್ದೆಯು ಪಾಸ್ ವರ್ಡ್ ಗಳು ಮತ್ತು ಬಯೊಮೆಟ್ರಿಕ್ಗಳ ಕುರಿತು ವಿಭಿನ್ನ ವಿಧಾನಗಳನ್ನು ಹೇಳಿದೆ ಎಂದರು.
ಬೇರೆ ರೀತಿಯಲ್ಲಿ ಹೇಳುವುದಾದರೆ ನ್ಯಾಯಸಮ್ಮತ ತನಿಖೆಗೆ ಅಗತ್ಯವಿರುವಾಗ ಪೊಲೀಸರು ಆರೋಪಿಯಿಂದ ಬಯೋ ಮೆಟ್ರಿಕ್ ಗಳನ್ನು ಪಡೆಯಬಹುದು ಮತ್ತು ಮೊಬೈಲ್ ಫೋನ್/ಕಂಪ್ಯೂಟರ್ ಸಿಸ್ಟಂ/ಇಮೇಲ್/ಸಾಫ್ಟ್ ವೇರ್ ಅಪ್ಲಿಕೇಷನ್ ಇತ್ಯಾದಿಗಳನ್ನು ತೆರೆಯಲು ಬಳಸಬಹುದು ಎಂದು ನ್ಯಾ.ಲಾಕಾ ವಿವರಿಸಿದರು.





