ಕಾಸರಗೋಡು: ಜಿಲ್ಲೆಯ ಪೆರಿಯ ಕಲ್ಯೋಟ್‍ನ ಯೂವಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‍ಲಾಲ್ ಕೊಲೆ ಪ್ರಕರಣದ ಎಲ್ಲ ಹನ್ನೊಂದು ಮಂದಿ ಆರೋಪಿಗಳನ್ನು ಕಣ್ಣೂರು ಕೇಂದ್ರ ಕಾರಾಗೃಹದಿಂದ ವೀಯೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ತನಿಖೆ ನೇತೃತ್ವ ವಹಿಸಿರುವ ಸಿ.ಬಿ.ಐ ಕೇಳಿಕೆ ಮೇರೆಗೆ ಇವರನ್ನು ವೀಯೂರ್‍ಗೆ ಸ್ಥಳಾಂತರಿಸಲಾಗಿದೆ.
ಕಣ್ಣೂರು ಜೈಲಿನಲ್ಲಿದ್ದ ಪ್ರಥಮ ಆರೋಪಿ ಪೀತಾಂಬರನ್‍ಗೆ ನ್ಯಾಯಾಲಯದ ಅನುಮತಿ ಪಡೆಯದೆ ಕಣ್ಣೂರು ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ಬಗ್ಗೆ ನ್ಯಾಯಾಲಯ ಸ್ಪಷ್ಟೀಕರಣ ಕೇಳಿತ್ತು. ಜೈಲು ಸಹಾಯಕ ಅಧೀಕ್ಷಕ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಲಯದ ಅನುಮತಿ ಪಡೆಯದೆ ಚಿಕಿತ್ಸೆ ನೀಡಿರುವುದಕ್ಕೆ ಕ್ಷಮೆ ಯಾಚಿಸಿದ್ದರು. ಆರೋಪಿಗಳಿಗೆ ಕಾನೂನು ಮೀರಿ ಕೆಲವೊಂದು ಸವಲತ್ತುಗಳು ಲಭಿಸುತ್ತಿರುವ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇವರನ್ನು ವೀಯೂರ್ ಜೈಲಿಗೆ ಸ್ಥಳಾಂತರಿಸುವಂತೆ ಸಿಬಿಐ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇನ್ನು ಆರೋಪಿ ಪೀತಾಂಬರನ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಎರಡು ಬಾರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಜೈಲು ಅಧೀಕ್ಷಕರಲ್ಲಿ ಸ್ಪಷ್ಟೀಕರಣ ಕೇಳಿದ್ದು, ಈ ಬಗ್ಗೆ ವಿಚಾರಣೆಯನ್ನು ನ್ಯಾಯಾಲಯ ನ. 26ಕ್ಕೆ ಮುಂದೂಡಿದೆ.
ಪೆರಿಯ ಅವಳಿ ಕೊಲೆ ಪ್ರಕರಣ: ಆರೋಪಿಗಳನ್ನು ವೀಯೂರ್ ಜೈಲಿಗೆ ಸ್ಥಳಾಂತರ
0
ನವೆಂಬರ್ 23, 2022
Tags





