HEALTH TIPS

ಟಿ.ವಿ ವಾಹಿನಿಗಳಿಗೆ ಮಾರ್ಗಸೂಚಿ: ರಾಷ್ಟ್ರೀಯ ಹಿತಾಸಕ್ತಿ ಕಾರ್ಯಕ್ರಮ ಕಡ್ಡಾಯ

 

               ನವದೆಹಲಿ: ಎಲ್ಲಾ ವಾಹಿನಿಗಳು ಪ್ರತಿದಿನ ರಾಷ್ಟ್ರೀಯ ಹಿತಾಸಕ್ತಿಯ ಕಾರ್ಯಕ್ರಮವನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು. ಸುದ್ದಿವಾಹಿನಿಗಳು, ಮನರಂಜನಾ ವಾಹಿನಿಗಳು ಸೇರಿ ಎಲ್ಲಾ ಸ್ವರೂಪದ ಟಿ.ವಿ.ವಾಹಿನಿಗಳ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ನೇಮಕ ಹಾಗೂ ಪಾಲುದಾರರ ಆಯ್ಕೆಗೂ ಮುನ್ನ ಅನುಮತಿ ಪಡೆಯಬೇಕು.

ಈ ಮಾರ್ಗಸೂಚಿಯನ್ನು ಪಾಲಿಸದ ಮತ್ತು ನಿರಂತರವಾಗಿ ಉಲ್ಲಂಘಿಸುವ ವಾಹಿನಿಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.

           ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಬುಧವಾರ ಹೊರಡಿಸಿರುವ, 'ಭಾರತದಲ್ಲಿ ಉಪಗ್ರಹ ವಾಹಿನಿಗಳ ಅಪ್‌ಲಿಂಕಿಂಗ್‌ ಮತ್ತು ಡೌನ್‌ಲಿಂಕಿಂಗ್‌ ಮಾರ್ಗಸೂಚಿಗಳು-2022'ರಲ್ಲಿ ಈ ಷರತ್ತುಗಳು ಇವೆ. ಸಚಿವಾಲಯವು ಈ ಹಿಂದೆಯೇ ಸಿದ್ಧಪಡಿಸಿದ್ದ ಈ ಮಾರ್ಗಸೂಚಿಗೆ ಕೇಂದ್ರ ಸಚಿವ ಸಂಪುಟವು ಇದೇ ಸೆಪ್ಟೆಂಬರ್ 28ರಂದು ಅನುಮೋದನೆ ನೀಡಿತ್ತು. ಈ ಮಾರ್ಗಸೂಚಿಗಳ ಜಾರಿ ಸಂಬಂಧ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ. ಈ ಮೊದಲು 2011ರಲ್ಲಿ ಇಂತಹ ಮಾರ್ಗಸೂಚಿ ಹೊರಡಿಸಲಾಗಿತ್ತು.

             ಇದು ಉಪಗ್ರಹ ವಾಹಿನಿಗಳ ಅಪ್‌ಲಿಂಕಿಂಗ್‌ ಮತ್ತು ಡೌನ್‌ಲಿಂಕಿಂಗ್‌ ಮಾರ್ಗಸೂಚಿ ಆಗಿದ್ದರೂ, ವಾಹಿನಿಗಳಲ್ಲಿ ಏನು ಪ್ರಸಾರವಾಗಬೇಕು ಮತ್ತು ಹೇಗೆ ಪ್ರಸಾರವಾಗಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

                'ದೇಶದ ಎಲ್ಲಾ ವಾಹಿನಿಗಳಲ್ಲಿ (ಕ್ರೀಡಾ ವಾಹಿನಿಗಳನ್ನು ಹೊರತುಪಡಿಸಿ) ಪ್ರತಿದಿನ 30 ನಿಮಿಷಗಳು 'ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾಮಾಜಿಕವಾಗಿ ಪ್ರಸ್ತುತ'ವಾದ ವಿಷಯಾಧಾರಿತ ಕಾರ್ಯಕ್ರಮವನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು' ಎಂದು ಮಾರ್ಗಸೂಚಿಯ 35ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

                'ರಾಷ್ಟ್ರೀಯ ಹಿತಾಸಕ್ತಿಯ ವಿಷಯಾಧರಿತ ಕಾರ್ಯಕ್ರಮವನ್ನು ಮಾರ್ಗಸೂಚಿಯನ್ನು ಪಾಲಿಸಲು ಅಗತ್ಯವಾದ ರೀತಿಯಲ್ಲಿ ವಾಹಿನಿಗಳು ಏರ್ಪಾಡು ಮಾಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳ ಬಗ್ಗೆ ಕೇಂದ್ರ ಸರ್ಕಾರವು ಆಗಾಗ್ಗೆ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಲಿದೆ. ಎಲ್ಲಾ ವಾಹಿನಿಗಳು ಈ ಸಲಹೆ ಮತ್ತು ಮಾರ್ಗದರ್ಶನಗಳನ್ನು ಪಾಲಿಸಬೇಕು' ಎಂದು ಮಾರ್ಗಸೂಚಿಯಲ್ಲಿ ನಿರ್ದೇಶಿಸಲಾಗಿದೆ.

                ಮಾರ್ಗಸೂಚಿ ಪ್ರಕಾರ, ಭಾರತದಿಂದ ಕಾರ್ಯನಿರ್ವಹಿಸುವ ಎಲ್ಲಾ ಟಿ.ವಿ. ವಾಹಿನಿಗಳ ಕಂಪನಿ ಅಥವಾ ಲಿಮಿಟೆಡ್‌ ಲಯಬಲೆಟಿ ಪಾರ್ಟ್‌ನರ್‌ (ಎಲ್‌ಎಲ್‌ಪಿ) ಕಂಪನಿಯ ನಿರ್ದೇಶಕರು, ಪಾಲುದಾರರು ಮತ್ತು ಸಿಇಒ ಯಾರಾಗುತ್ತಾರೆ ಎಂಬುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು.

               'ಈ ಹುದ್ದೆಗಳಲ್ಲಿ ಇರುವವರು ರಾಜೀನಾಮೆ ನೀಡಿದರೂ, ಅದನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಮಾಹಿತಿ ನೀಡಬೇಕು. ಈ ಹುದ್ದೆಗಳಿಗೆ ನೇಮಕ ಮಾಡುವುದಕ್ಕೂ ಮುನ್ನ ಸಚಿವಾಲಯದ 'ಸೆಕ್ಯುರಿಟಿ ಕ್ಲಿಯರೆನ್ಸ್‌ (ಭದ್ರತಾ ನಿರಾಕ್ಷೇಪಣಾ ಪತ್ರ)' ಪಡೆಯಬೇಕು' ಎಂದು ಮಾರ್ಗಸೂಚಿಯಲ್ಲಿ ಷರತ್ತು ಹಾಕಲಾಗಿದೆ. ಈ ಷರತ್ತು ಈ ಹಿಂದಿನ ಮಾರ್ಗಸೂಚಿಯಲ್ಲೂ ಇತ್ತು. 'ಸೆಕ್ಯುರಿಟಿ ಕ್ಲಿಯರೆನ್ಸ್‌ ನಿರಾಕರಿಸಲಾಗುವ ವ್ಯಕ್ತಿಗಳನ್ನು ಈ ಹುದ್ದೆಗಳಿಗೆ ನೇಮಕ ಮಾಡುವಂತಿಲ್ಲ' ಎಂದು ನೂತನ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

                'ಒಂದೊಮ್ಮೆ ನೇಮಕ ಮಾಡಿ, ಅಂತಹವರನ್ನು ಹುದ್ದೆಯಲ್ಲಿ ಮುಂದುವ ರಿಸಿದರೆ ವಾಹಿನಿಯ ಪ್ರಸಾರವನ್ನು 30 ದಿನಗಳವರೆಗೆ ತಡೆಯಬಹುದು ಮತ್ತು ವಾಹಿನಿಗೆ ನೀಡಿರುವ ಅನುಮತಿಯನ್ನು ಅಮಾನತು ಮಾಡಬಹುದು' ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. 'ಪದೇ-ಪದೇ ಇದು ಮುಂದುವರಿದರೆ ಸಚಿವಾಲಯವು ಇನ್ನೂ ಕಠಿಣ ಕ್ರಮ ತೆಗೆದುಕೊಳ್ಳಬಹುದು' ಎಂದು ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ. ಆದರೆ, ಅಂತಹ ಕಠಿಣ ಕ್ರಮಗಳು ಯಾವುವು ಎಂಬುದನ್ನು ಮಾರ್ಗಸೂಚಿಯಲ್ಲಿ ವಿವರಿಸಿಲ್ಲ.

                          ಇದರ ಹೊರತಾಗಿ ವಾಹಿನಿಗಳ ಅಪ್‌ಲಿಂಕಿಂಗ್‌ ಮತ್ತು ಡೌನ್‌ಲಿಂಕಿಂಗ್‌ ಸಂಬಂಧಿಸಿದಂತೆ ಹಲವು ಮಾರ್ಗಸೂಚಿಗಳನ್ನು ಸಚಿವಾಲಯವು ಹೊರಡಿಸಿದೆ.

                                            ನೇರ ಪ್ರಸಾರಕ್ಕೂ ಷರತ್ತು
               ಸುದ್ದಿ ವಾಹಿನಿಗಳು ಯಾವುದೇ ಕಾರ್ಯಕ್ರಮಗಳ ನೇರ ಪ್ರಸಾರಕ್ಕೂ ಮುನ್ನ ಪೂರ್ವಾನುಮತಿ ಪಡೆಯಬೇಕಿಲ್ಲ. ಆದರೆ, ಕಾರ್ಯಕ್ರಮದ ನೇರ ಪ್ರಸಾರಕ್ಕೆ ಬಳಸುವ ಅಪ್‌ಲಿಂಕಿಂಗ್‌ ಉಪಕರಣ ಸೇವೆ ಯಾರಿಂದ ಪಡೆಯಲಾಗುತ್ತಿದೆ ಎಂಬುದರ ಮಾಹಿತಿ ನೀಡಬೇಕು. ಮತ್ತು ಅಂತಹ ಉಪಕರಣಗಳನ್ನು ಮೊದಲೇ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದೆ. ಇದನ್ನು ಉಲ್ಲಂಘಿಸಿದಲ್ಲಿ, ಕಾರ್ಯಕ್ರಮದ ಪ್ರಸಾರವನ್ನು ತಡೆಹಿಡಿಯಲಾಗುತ್ತದೆ ಮತ್ತು ನಿಗದಿತ ಅವಧಿಗೆ ವಾಹಿನಿಯ ಪ್ರಸಾರವನ್ನು ನಿರ್ಬಂಧಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

                      ಮನರಂಜನಾ ವಾಹಿನಿಗಳು ಯಾವುದೇ ಕಾರ್ಯಕ್ರಮಗಳ ನೇರ ಪ್ರಸಾರ ಮಾಡುವುದಕ್ಕೂ ಮುನ್ನ 15 ದಿನ ಮೊದಲೇ ಅನುಮತಿ ಪಡೆಯಲೇಬೇಕು. ಪೂರ್ವಾನುಮತಿ ಪಡೆಯದೇ ಇದ್ದಲ್ಲಿ, ಕಾರ್ಯಕ್ರಮದ ಪ್ರಸಾರವನ್ನು ತಡೆಯಲಾಗುತ್ತದೆ ಮತ್ತು ವಾಹಿನಿಗೆ ನೀಡಲಾಗಿರುವ ಅನುಮತಿಯನ್ನು ಅಮಾನತು ಮಾಡಲಾಗುತ್ತದೆ ಎಂದು ವಿವರಿಸಲಾಗಿದೆ.

ಪ್ರಮುಖ ಅಂಶಗಳು

* ವಿದೇಶಿ ವಾಹಿನಿಗಳನ್ನು ಮತ್ತು ಅವುಗಳ ಕಾರ್ಯಕ್ರಮಗಳನ್ನು ಭಾರತದಿಂದ ಅಪ್‌ಲಿಂಕ್‌ ಮಾಡಬಹುದು

* ಈ ಮೊದಲು ಒಂದು ವಾಹಿನಿಗೆ ಒಂದೇ ಟೆಲಿಪೋರ್ಟ್‌ ಬಳಕೆಗೆ ಅವಕಾಶ ಇತ್ತು. ಈಗ ಈ ಮಿತಿಯನ್ನು ತೆಗೆದುಹಾಕಲಾಗಿದೆ

* ವಾಹಿನಿಗಳು ಪ್ರಸಾರದ ಭಾಷೆಯನ್ನು ಬದಲಾವಣೆ ಮಾಡಿಕೊಳ್ಳುವ ಮುನ್ನ ಪೂರ್ವಾನುಮತಿ ಪಡೆಯಬೇಕಿಲ್ಲ

* ಸುದ್ದಿ ವಾಹಿನಿಗಳಿಗೆ ಈವರೆಗೆ ಒಂದು ವರ್ಷದವರೆಗೆ ಮಾತ್ರ ಅನುಮತಿ ನೀಡಲಾಗುತ್ತಿತ್ತು. ನಂತರ ಪ್ರತಿವರ್ಷ ಅನುಮತಿ ಪಡೆಯಬೇಕಿತ್ತು. ಈಗ ಒಂದೇ ಬಾರಿ ಐದು ವರ್ಷಗಳ ಅವಧಿಗೆ ಅನುಮತಿ ನೀಡಲಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries