ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯನ್ವಯ ಒದಗಿಸಲಾದ ಕೆಲಸದ ವೇತನಗಳಿಗಾಗಿ ಕೇಂದ್ರ ಸರ್ಕಾರ 18 ರಾಜ್ಯಗಳಿಗೆ ಇನ್ನೂ ರೂ 4,700 ಕೋಟಿ ಬಾಕಿಯಿರಿಸಿದೆ. ಉಳಿದಂತೆ 19 ರಾಜ್ಯಗಳಿಗೆ ರೂ 5,450 ಕೋಟಿ ಮೌಲ್ಯದ ಸಲಕರಣೆ ವೆಚ್ಚಗಳನ್ನೂ ಬಾಕಿಯಿರಿಸಿದೆ ಎಂದು ಅಂಕಿಅಂಶಗಳು ತಿಳಿಸುತ್ತವೆ.
ವೇತನ ಸಂಬಂಧ ಬಾಕಿಯಿರುವ ರೂ 4,700 ಕೋಟಿ ಪೈಕಿ ಪಶ್ಚಿಮ ಬಂಗಾಳಕ್ಕೆ ಗರಿಷ್ಠ ರೂ 2,748 ಕೋಟಿಯಷ್ಟು ಹಣವನ್ನು ಕೇಂದ್ರ ಬಾಕಿಯಿರಿಸಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಇತರ 17 ರಾಜ್ಯಗಳಿಗೆ ಸುಮಾರು 2,000 ಕೋಟಿ ವೇತನದ ಹಣ ಬಾಕಿಯಿರಿಸಿದೆ. ನಾಗಾಲ್ಯಾಂಡ್‌ನಲ್ಲಿ ಕೇವಲ 4.32 ಲಕ್ಷ ಮಂದಿ ಉದ್ಯೋಗ ಕಾರ್ಡ್ ಹೊಂದಿದ್ದರೂ ಬಾಕಿ ವೇತನ ಮೊತ್ತ ರೂ 192 ಕೋಟಿ ಆಗಿದೆ. ಉತ್ತರ ಪ್ರದೇಶಕ್ಕೆ ಬಾಕಿ ಮೊತ್ತ ರೂ 284 ಕೋಟಿ ಆಗಿದ್ದರೆ, ಬಿಹಾರಕ್ಕೆ ರೂ 287 ಕೋಟಿ, ಜಾರ್ಖಂಡ್‌ಗೆ ರೂ 263 ಕೋಟಿ, ತಮಿಳುನಾಡಿಗೆ ರೂ 173 ಕೋಟಿ ಬಾಕಿಯಿರಿಸಿದೆ.
ಮನ್‌ರೇಗಾ ಯೋಜನೆಯಡಿ ಸಲಕರಣೆ ವೆಚ್ಚಗಳಾದ ರೂ 5,450 ಕೋಟಿಯಷ್ಟು ಹಣವನ್ನು 19 ರಾಜ್ಯಗಳಿಗೆ ಪಾವತಿಸದೆ ಕೇಂದ್ರ ಬಾಕಿಯಿರಿಸಿದೆ. ಇದರಲ್ಲಿ ಗರಿಷ್ಠ ರೂ 2,685 ಕೋಟಿ ಪಶ್ಚಿಮ ಬಂಗಾಳಕ್ಕೆ ಸಲ್ಲಬೇಕಿದ್ದರೆ, ಆಂಧ್ರ ಪ್ರದೇಶಕ್ಕೆ ರೂ 700 ಕೋಟಿ, ಕರ್ನಾಟಕಕ್ಕೆ ರೂ 341 ಕೋಟಿ ಹಾಗೂ ಮಧ್ಯ ಪ್ರದೇಶಕ್ಕೆ ರೂ 300 ಕೋಟಿ ಹಣವನ್ನು ಕೇಂದ್ರ ಬಾಕಿಯಿರಿಸಿದೆ.
ಈ ಬಾಕಿ ಮೊತ್ತಗಳನ್ನು ಪಾವತಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಿತ್ತ ಸಚಿವಾಲಯದಿಂದ ಹೆಚ್ಚುವರಿ ಅನುದಾನ ಕೋರಿದೆ.


