ನವದೆಹಲಿ: ಭಾರತೀಯ ರೈಲ್ವೆ ಬಳಕೆದಾರರ ಪೈಕಿ 3 ಕೋಟಿಗೂ ಅಧಿಕ ಮಂದಿಯ ದತ್ತಾಂಶವನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ ಎಂದು ಹ್ಯಾಕರ್‌ಗಳ ವೇದಿಕೆ ಹೇಳಿದೆ. ಆದರೆ, ಕೇಂದ್ರ ರೈಲ್ವೆ ಸಚಿವಾಲಯ ಇದನ್ನು ಅಲ್ಲಗಳೆದಿದೆ.
'ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಸೇರಿದಂತೆ ರೈಲ್ವೆ ಇಲಾಖೆಯ ಯಾವ ಸರ್ವರ್‌ನಿಂದಲೂ ದತ್ತಾಂಶ ಸೋರಿಕೆಯಾಗಿಲ್ಲ.
ದತ್ತಾಂಶಕ್ಕೆ ಕನ್ನ ಹಾಕಲಾಗಿದೆ ಎಂಬ ಸುದ್ದಿಯು ಸತ್ಯಕ್ಕೆ ದೂರವಾದುದು' ಎಂದು ಸಚಿವಾಲಯ ಬುಧವಾರ ಸ್ಪಷ್ಟಪಡಿಸಿದೆ. ಈ ಸಂಬಂಧ ಐಆರ್‌ಸಿಟಿಸಿ ತನಿಖೆ ಕೈಗೊಳ್ಳಲಿದೆ ಎಂದೂ ಹೇಳಿದೆ.
'3 ಕೋಟಿಗೂ ಅಧಿಕ ಮಂದಿಯ ದತ್ತಾಂಶ ನಮ್ಮ ಬಳಿ ಇದೆ. ಅದನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕಿಟ್ಟಿದ್ದೇವೆ. ಬಳಕೆದಾರರ ಹೆಸರು, ಲಿಂಗ, ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ನಗರದ ಮಾಹಿತಿಯನ್ನು ಇದು ಒಳಗೊಂಡಿದೆ' ಎಂದು ಹ್ಯಾಕರ್‌ಗಳ ವೇದಿಕೆ (ಏಲಿಯಸ್ ಶ್ಯಾಡೊಹ್ಯಾಕರ್ಸ್) ತಿಳಿಸಿದೆ.
'ರೈಲ್ವೆ ಬಳಕೆದಾರರ ದತ್ತಾಂಶ ಸೋರಿಕೆ ಸಾಧ್ಯತೆ ಕುರಿತ ಮಾಹಿತಿಯನ್ನು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್‌ಟಿ) ನಮ್ಮೊಂದಿಗೆ ಹಂಚಿಕೊಂಡಿತ್ತು. ಮಾದರಿ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ದತ್ತಾಂಶ ಸೋರಿಕೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ದತ್ತಾಂಶ ಸೋರಿಕೆಯಾಗಿದೆಯೇ ಇಲ್ಲವೆ ಎಂಬುದನ್ನು ಕೂಡಲೇ ಪರೀಕ್ಷಿಸುವಂತೆ ಐಆರ್‌ಸಿಟಿಸಿಯ ವ್ಯಾವಹಾರಿಕ ಪಾಲುದಾರರಿಗೂ ಸೂಚಿಸಲಾಗಿತ್ತು' ಎಂದು ಸಚಿವಾಲಯ ಹೇಳಿದೆ.





