HEALTH TIPS

ಸ್ವತಂತ್ರ ಸುದ್ದಿವಾಹಿನಿಯ ಅನುಪಸ್ಥಿತಿದೇಶವನ್ನು ಕಾಡುವುದು ಖಚಿತ

 

          ಎನ್‌ಡಿಟಿವಿ ಸುದ್ದಿವಾಹಿನಿಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಯು ಭಾರತದ ಟಿ.ವಿ. ಸುದ್ದಿವಾಹಿನಿ ಪತ್ರಿಕೋದ್ಯಮಕ್ಕೆ ಮತ್ತು ಒಟ್ಟಾಗಿ ಪತ್ರಿಕೋದ್ಯಮಕ್ಕೆ ಬೇಸರದ ಸಂಗತಿ. ಎನ್‌ಡಿಟಿವಿ ಎಂಬ ಹೆಸರು ಉಳಿಯಬಹುದು. ಆದರೆ, ಅದಾನಿ ಸಮೂಹವು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಆ ಸುದ್ದಿ ವಾಹಿನಿಯ ಆತ್ಮವು ಹೊರಟುಹೋಗಿದೆ.

              ಎನ್‌ಡಿಟಿವಿ ಸಮೂಹದ ಸಂಸ್ಥಾಪಕರಾದ ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ಅವರು ರಾಜೀನಾಮೆ ನೀಡಿದ್ದಾರೆ. ಪತ್ರಕರ್ತರು ಎನ್‌ಡಿಟಿವಿಯಿಂದ ಹೊರನಡೆಯಲು ಆರಂಭಿಸಿದ್ದಾರೆ. ಜಗತ್ತಿನ ಮೂರನೇ ಅತ್ಯಂತ ಸಿರಿವಂತ ವ್ಯಕ್ತಿ ಗೌತಮ್‌ ಅದಾನಿ ಮಾಲೀಕತ್ವದ ಅದಾನಿ ಸಮೂಹವು ಎನ್‌ಡಿಟಿವಿಯ ಶೇ 29ರಷ್ಟು ಪಾಲು ಹೊಂದಿದ್ದ ಆರ್‌ಆರ್‌ಪಿಆರ್‌ ಎಂಬ ಕಂಪನಿಯನ್ನು ಖರೀದಿಸಿದೆ. ಬಳಿಕ ಎನ್‌ಡಿಟಿವಿಯ ಒಂದಿಷ್ಟು ಷೇರುಗಳನ್ನು ಮುಕ್ತ ಮಾರುಕಟ್ಟೆ
ಯಲ್ಲಿ ಖರೀದಿಸಿದೆ. ಆರ್‌ಆರ್‌ಪಿಆರ್‌ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಅದಾನಿ ಸಮೂಹವು ನೇಮಿಸಿದೆ. ಆ ಮೂಲಕ ಎನ್‌ಡಿಟಿವಿ ಮತ್ತು ಆ ಸಮೂಹದ ಇತರ ವಾಹಿನಿಗಳನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವತ್ತ ಮುಂದಡಿ ಇರಿಸಿದೆ. ಒಟ್ಟಿನಲ್ಲಿ ಇದರ ಅರ್ಥ ಏನು ಎಂದರೆ, ನಮಗೆ ತಿಳಿದಿರುವ ಎನ್‌ಡಿಟಿವಿ ಇನ್ನು ಮುಂದೆ ಇರುವುದಿಲ್ಲ.

                ಭಾರತದ ಟಿ.ವಿ. ಸುದ್ದಿವಾಹಿನಿ ಪತ್ರಿಕೋದ್ಯಮದ ಆರಂಭಿಕ ಸಂಸ್ಥೆಗಳಲ್ಲಿ ಎನ್‌ಡಿಟಿವಿಯೂ ಒಂದು. ಶೈಲಿ, ವಿಷಯ ಮತ್ತು ಸ್ಫೂರ್ತಿಯ ವಿಚಾರದಲ್ಲಿ ಟಿ.ವಿ. ಸುದ್ದಿವಾಹಿನಿ ಪತ್ರಿಕೋದ್ಯಮದಲ್ಲಿ ಸಂಸ್ಥೆಯು ಕ್ರಾಂತಿಯನ್ನೇ ಉಂಟು ಮಾಡಿತು. ವರದಿಗಾರಿಕೆ, ಪ್ರಸ್ತುತಿ, ವಿಷಯ ಮತ್ತು ವಿಶ್ಲೇಷಣೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಈ ಸುದ್ದಿವಾಹಿನಿಯೇ ಮಾನದಂಡವಾಗಿತ್ತು. ದೃಶ್ಯ ಮಾಧ್ಯಮ ಸಂವಹನದ ವ್ಯಾಕರಣ ಮತ್ತು ಭಾಷೆಯನ್ನು ಈ ಸುದ್ದಿವಾಹಿನಿಯು ಸೃಷ್ಟಿ ಮಾಡಿಕೊಟ್ಟಿತು. ಎಲ್ಲಕ್ಕಿಂತ ಮುಖ್ಯವಾಗಿ, ಈ ಸುದ್ದಿವಾಹಿನಿಯು ವಿಶ್ವಾಸಾರ್ಹತೆ ಉಳಿಸಿಕೊಂಡಿತ್ತು. ದೇಶದ ಬಹುತೇಕ ಮಾಧ್ಯಮ ಸಂಸ್ಥೆಗಳು ಪ್ರಲೋಭನೆಗಳು, ಒತ್ತಡಗಳು ಅಥವಾ ಬೆದರಿಕೆಗೆ ಮಣಿದಿದ್ದಾಗ ಈ ಸುದ್ದಿವಾಹಿನಿಯು ಸ್ವತಂತ್ರ ಪತ್ರಿಕೋದ್ಯಮದ ಆದರ್ಶಕ್ಕೇ ಅಂಟಿಕೊಂಡಿತ್ತು. ಪ್ರಣಯ್‌ ರಾಯ್‌ ಅವರು ಈ ಸುದ್ದಿವಾಹಿನಿಯ ಮುಖವೇ ಆಗಿದ್ದರು. ಪತ್ರಿಕೋದ್ಯಮದ ಪಾಠಶಾಲೆ ಎಂಬಂತೆಯೂ ಎನ್‌ಡಿಟಿವಿ ಕೆಲಸ ಮಾಡಿದೆ. ಈಗ ದೇಶದಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ
ಪತ್ರಕರ್ತರಲ್ಲಿ ಹಲವರು ಎನ್‌ಡಿಟಿವಿ ಸ್ಟುಡಿಯೊದಲ್ಲಿ ಸುದ್ದಿವಾಹಿನಿ ಪತ್ರಿಕೋದ್ಯಮದ ಪಾಠಗಳನ್ನು ಕಲಿತವರು. ಅವರಲ್ಲಿ ಕೆಲವರು ಕಲಿತ ಪಾಠ ಮರೆತಿದ್ದಾರೆ ಎಂಬುದು ನಿಜ. ಆದರೆ, ಕಲಿಸಿದ ಶಾಲೆ ಎಂದೂ ಆ ಪಾಠಗಳನ್ನು ಮರೆತೇ ಇಲ್ಲ.

                ಸರ್ಕಾರಕ್ಕೆ ಹತ್ತಿರವಿದೆ ಎಂದು ಭಾವಿಸಲಾಗಿರುವ ಅದಾನಿ ಸಮೂಹವು ಎನ್‌ಡಿಟಿವಿಯ ನಿಯಂತ್ರಣವನ್ನು ಕೈಗೆ ತೆಗೆದುಕೊಂಡ ಬಳಿಕವೂ ಸುದ್ದಿವಾಹಿನಿಯು ಈ ಹಿಂದೆ ಇದ್ದ ರೀತಿಯಲ್ಲಿಯೇ ಇರಬೇಕು ಎಂದು ನಿರೀಕ್ಷಿಸಲಾಗದು. ಅದಲ್ಲದೆ, ಆ ಸಮೂಹವು ದೇಶದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆಯನ್ನೂ ಮಾಡಿದೆ. ಆ ಹಿತಾಸಕ್ತಿಯನ್ನೂ ಅದಾನಿ ಸಮೂಹವು ಕಾಯ್ದುಕೊಳ್ಳಬೇಕಿದೆ. ಭಾರತದ ಟಿ.ವಿ. ಸುದ್ದಿವಾಹಿನಿಗಳ ಮತ್ತು ಹಾಗೆ ನೋಡಿದರೆ ಇಡೀ ಪತ್ರಿಕೋದ್ಯಮದ ಹಣಕಾಸು ಸ್ಥಿತಿ ಬಹಳ ದುರ್ಬಲವಾಗಿದೆ, ಪತ್ರಿಕೋದ್ಯಮಕ್ಕೆ ಕಾರ್ಪೊರೇಟ್‌ ಸ್ಪರ್ಶ ಬೇಕಿದೆ ಮತ್ತು ಅದಕ್ಕೆ ಹೆಚ್ಚಿನ ಹಣದ ಹರಿವಿನ ಅಗತ್ಯವಿದೆ ಎಂಬ ವಾದವೊಂದು ಇದೆ. ಆದರೆ ಇದರಿಂದ ಎಲ್ಲ ಸಂದರ್ಭಗಳಲ್ಲಿಯೂ ಒಳ್ಳೆಯದಾಗುತ್ತದೆ ಎಂದು ಭಾವಿಸಲಾಗದು. ಈ ರೀತಿ ಹಣದ ರೂಪದಲ್ಲಿ ಪಡೆಯುವ ಪ್ರಯೋಜನಕ್ಕೆ ಪ್ರತಿಯಾಗಿ ಪತ್ರಿಕೋದ್ಯಮದ ಸ್ವರೂಪ ಮತ್ತು ಗುಣಮಟ್ಟವನ್ನು ಬಲಿ ಕೊಡಬೇಕಾಗುತ್ತದೆ.
               ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿರುವ ಮಾಧ್ಯಮ ಸ್ವಾತಂತ್ರ್ಯವು ದೇಶದಲ್ಲಿ ಕುಸಿಯುತ್ತಲೇ ಇದೆ. ಅಧಿಕಾರಸ್ಥರ ಮುಂದೆ ಸತ್ಯವನ್ನು ಹೇಳಲು ಹಿಂಜರಿಕೆ ತೋರದಿದ್ದ ಮಾಧ್ಯಮ ಸಂಸ್ಥೆಗಳಲ್ಲಿ ಎನ್‌ಡಿಟಿವಿಯೂ ಒಂದು. ಹೀಗೆ ಮಾಡಿದ್ದಕ್ಕೆ ಈ ಹಿಂದೆ ಸಂಸ್ಥೆಯು ಬೆಲೆ ತೆತ್ತಿದ್ದೂ ಇದೆ. ಭಾರತದಂತಹ ವೈವಿಧ್ಯಮಯ ಮತ್ತು ಸಂಕೀರ್ಣ ದೇಶಕ್ಕೆ ಬಹುಧ್ವನಿಗಳು ಮತ್ತು ಬಹುನಿಲುವುಗಳು ಅಗತ್ಯವಾಗಿ ಬೇಕು. ಮಾಧ್ಯಮಗಳಲ್ಲಿ ಹೆಚ್ಚಿನವು ಒಂದೇ ಧ್ವನಿಯಲ್ಲಿ ಮಾತನಾಡುತ್ತಿವೆ ಮತ್ತು ಅವು ಅಧಿಕಾರಸ್ಥರಿಗೆ ಹಿತವಾಗುವುದನ್ನು ಮಾತ್ರ ಹೇಳುತ್ತಿವೆ. ಇಂತಹ ಸಂದರ್ಭದಲ್ಲಿ ಭಿನ್ನ ಮತ್ತು ಪ್ರಶ್ನೆ ಮಾಡುವ ಧ್ವನಿಯ ಅನುಪಸ್ಥಿತಿಯು ಕಾಡುವುದು ಖಚಿತ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries