ತಿರುವನಂತಪುರ: ಸಂವಿದಾನದಲ್ಲಿ ಜಾತ್ಯತೀತೆಯು ಬೆರೆತು ಹೋಗಿದೆ. ಸಂವಿಧಾನವು ನಾಸ್ತಿಕವಾದಿಯೂ ಅಲ್ಲ, ದೇವರ ಅಸ್ತಿತ್ವದ ಬಗ್ಗೆ ಗೊತ್ತಿಲ್ಲ ಎಂಬ ಸಿದ್ದಾಂತವನ್ನುಅದು ಹೊಂದಿಲ್ಲ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ನ್ಯಾ.
ದೇವನ್ ರಾಮಚಂದ್ರನ್ ಪ್ರತಿಪಾದಿಸಿದ್ದಾರೆ
ನವೆಂಬರ್ 26ರಂದು ಮುವತ್ತಪುಳ ಕೋರ್ಟ್ ಸಂಕೀರ್ಣದಲ್ಲಿ ಸಂವಿಧಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 'ಭಾರತದ ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆ' ಎಂಬ ವಿಷಯದ ಕುರಿತು ಅವರು ನೀಡಿದ ಉಪನ್ಯಾಸದ ಸಂದರ್ಭದಲ್ಲಿ ಮೇಲಿನಂತೆ ಪ್ರತಿಪಾದಿಸಿದ್ದಾರೆ.
ಭಾರತೀಯರು ಸಾಮಾನ್ಯವಾಗಿ ಧಾರ್ಮಿಕ ವ್ಯಕ್ತಿಗಳಾಗಿದ್ದು, ಅವರು ದೇವರನ್ನು ನಂಬುತ್ತಾರೆ ಮತ್ತು ಸಂವಿಧಾನದ ವಿವಿಧ ವಿಭಾಗಗಳಲ್ಲಿ ಪ್ರಾರ್ಥನೆ ಮಾಡುವ ಹಕ್ಕು ಹಾಗೂ ಧಾರ್ಮಿಕತೆಯನ್ನು ಪ್ರಕಟಿಸುವ ಮತ್ತು ಪ್ರಸಾರಿಸುವ ಹಕ್ಕನ್ನು ಒದಗಿಸಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.
'ಸಂವಿಧಾನದಲ್ಲಿ ಜಾತ್ಯತೀತತೆಯನ್ನು ನಿರ್ದಿಷ್ಟವಾಗಿ ಉಲ್ಲೇಖಿಸಬೇಕಾದ ಅಗತ್ಯವಿಲ್ಲ. ಜಾತ್ಯತೀತತೆಯು ಈಗಾಗಲೇ ಸಂವಿಧಾನದಲ್ಲಿ ಅಳವಡಿಸಲಾಗಿರುವ ಒಂದು ಸಂಗತಿಯಾಗಿದೆ. ಇದು ಬಹಳ ಸರಳ ಸಂಗತಿ, ನೀವೊಮ್ಮೆ ಸಂವಿಧಾನದ ಪೀಠಿಕೆಯತ್ತ ಗಮನಿಸಿ. ಅದರಲ್ಲಿನ ಮುಕ್ತತೆಯನ್ನು ನೋಡಿದರೆ, ಅದುಶಾಂತಿ, ಚಿಂತನೆ, ನಂಬಿಕೆ ಹಾಗೂ ಪ್ರಾರ್ಥನೆಯನ್ನು ಕುರಿತು ಮಾತನಾಡುತ್ತದೆ. ದಯವಿಟ್ಟು 19(1) (a) ವಿಧಿಯನ್ನುಗಮನಿಸಿ, ಅದು ವಾಕ್ ಮತ್ತು ಅಭಿವ್ಯಕ್ತಿಯ ಕುರಿತು ಮಾತನಾಡುತ್ತದೆ. ಹಾಗೆಯೇ ದಯವಿಟ್ಟು ವಿಧಿ 25 ಮತ್ತು 26ಕ್ಕೆ ತೆರಳಿ. ಅದು ಪ್ರಾರ್ಥನೆ ಹಕ್ಕು ಹಾಗೂ ಧಾರ್ಮಿಕತೆಯನ್ನು ಪ್ರಕಟಿಸುವ ಮತ್ತು ಪ್ರಸರಣ ಮಾಡುವ ಹಕ್ಕನ್ನುನೀಡುತ್ತದೆ. ಹೀಗಾಗಿ ನಮ್ಮ ಸಂವಿಧಾನವು ನಾಸ್ತಿಕವಾದವೂ ಅಲ್ಲ; ಹಾಗೆಯೇ ನಿರೀಶ್ವರವಾದವೂ ಅಲ್ಲ. ನಾವು ಭಾರತೀಯರೆಲ್ಲ ಸಾಮಾನ್ಯವಾಗಿ ಧಾರ್ಮಿಕ ವ್ಯಕ್ತಿಗಳಾಗಿದ್ದು, ನಾವು ದೇವರು ಮತ್ತು ಪ್ರಾರ್ಥನೆಯಲ್ಲಿ ನಂಬಿಕೆ ಹೊಂದಿದ್ದೇವೆ ಎಂದು ನ್ಯಾ. ರಾಮಚಂದ್ರನ್ ಹೇಳಿದ್ದಾರೆಂದು 'ಬಾರ್&ಬೆಂಚ್' ಅಂತರ್ಜಾಲ ತಾಣ ವರದಿ ಮಾಡಿದೆ.
ಸಂವಿಧಾನವನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಅರ್ಥಮಾಡಿಕೊಳ್ಳುವುದೆರಡೂ ನಾಗರಿಕರ ಪಾಲಿಗೆ ಬಹು ದೊಡ್ಡ ಅಸ್ತ್ರಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನವನ್ನು ನಾವು ಅರ್ಥಮಾಡಿಕೊಳ್ಳದಿರಲು ನಾವೇನು ಮತ್ತು ನಾವು ಯಾರು ಎಂಬುದನ್ನು ಅರ್ಥಮಾಡಿಕೊಳ್ಳದಿರುವುದೇ ಕಾರಣ. ಸಂವಿಧಾನ ನಮ್ಮ ಬಹು ದೊಡ್ಡ ಅಸ್ತ್ರವಾಗಿದ್ದು, ನೀವೇನಾದರೂ ಕಾನೂನುಬಾಹಿರ ಕೃತ್ಯಗಳನ್ನು ಎಸಗಿದರೆ ಅದರ ವಿರುದ್ಧ ಕವಚವಾಗಿ ಕೆಲಸ ಮಾಡುತ್ತದೆ. ಸಂವಿಧಾನವನ್ನು ಮರೆತವರು ಭಾರತೀಯರಾಗಿ ಜೀವಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಅಧಿಕಾರಿಗಳು ಸಾಂವಿಧಾನಿಕ ಪ್ರಜ್ಞೆ ಮತ್ತು ನೈತಿಕತೆಯೊಂದಿಗೆ ಜನರಿಗಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ನಾವು ಸಾರ್ವಭೌಮರಾಗಿದ್ದು, ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೇವೆ. ನಾಯಕರು ನಮ್ಮಿಂದ ಆರಿಸಲ್ಪಡುವವರಾಗಿದ್ದಾರೆ. ನಾಗರಿಕರಿಗೆ ಸಂಬಂಧಪಟ್ಟಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಒಂದೇ ಆಗಿದ್ದು, ಈ ಎರಡೂ ಸರ್ಕಾರಗಳು ನಾವು ಆಯ್ಕೆ ಮಾಡಿರುವ ನಮ್ಮಪ್ರತಿನಿಧಿಗಳಾಗಿವೆ. ನಾವು ಈ ಬಗೆಯಲ್ಲಿ ಚಿಂತಿಸಿದರೆ ಯಾವುದೇ ಬಿಕ್ಕಟ್ಟು ಇರುವುದಿಲ್ಲ.ಜನಪ್ರತಿನಿಧಿಗಳು ಜನರಿಗಾಗಿ ಏನಾದರೂ ಮಾಡಿದಾಗ ಅವರು ಜನರಿಗಾಗಿ ಯಾವುದೋ ಮಹತ್ವವಾದುದನ್ನು ಮಾಡಿದರು ಎಂದು ಪ್ರಶಂಸಿಸುವ ಅಗತ್ಯವಿಲ್ಲ. ದಯವಿಟ್ಟು ಅರ್ಥಮಾಡಿಕೊಳ್ಳಿ, ಯಾರೂ ನಮಗೇನೂ ಮಾಡುತ್ತಿಲ್ಲ. ನೀವು ನಿಮಗಾಗಿ ಮಾಡಿಕೊಳ್ಳುತ್ತಿದ್ದೀರಿ. ಸದ್ಯ ಇಂತಹ ಸಾಂಘಿಕ ಪ್ರಜ್ಞೆಯೇ ಕಾರ್ಯಾಚರಣೆಯಲ್ಲಿರುವುದು. ಸಾರ್ವಜನಿಕ ಅಧಿಕಾರಿ ಸಾಂವಿಧಾನಿಕ ಪ್ರಜ್ಞೆ ಮತ್ತು ನೈತಿಕತೆಯನ್ನು ಹೊಂದಿರಬೇಕೇ ಹೊರತು ತನ್ನ ಸ್ವಂತದ್ದಲ್ಲ ಎಂದು ನ್ಯಾ. ದೇವನ್ ರಾಮಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.





