ನವದೆಹಲಿ: ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣದ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾನನ್ನು ಶುಕ್ರವಾರ ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾರ್ಕೋ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಆಫ್ತಾಬ್‌ನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದೂ ತಿಳಿಸಿದ್ದಾರೆ.
ಆರೋಪಿ ಆಫ್ತಾಬ್ 14 ದಿನಗಳ ಪೊಲೀಸ್ ಕಸ್ಟಡಿ ಅವಧಿಯಲ್ಲಿದ್ದಾಗ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು, ಆತನನ್ನು ಮಂಪರು ಪರೀಕ್ಷೆ ಮತ್ತು ಸುಳ್ಳುಪತ್ತೆ ವಿಶ್ಲೇಷಣೆಯ ಪರೀಕ್ಷೆಗಳಿಗೆ ಒಳಪಡಿಸಿದಾಗ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನೀಡಿರುವ ಉತ್ತರಗಳು ಒಂದೇ ಆಗಿವೆ ಎಂದು ಮೂಲಗಳು ಹೇಳಿವೆ.
ಆರೋಪಿಯನ್ನು ಗುರುವಾರ ದೆಹಲಿಯ ರೋಹಿಣಿ ಆಸ್ಪತ್ರೆಯಲ್ಲಿ ಎರಡು ತಾಸಿಗೂ ಹೆಚ್ಚು ಸಮಯ ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದಕ್ಕೂ ಮೊದಲು ಸುಳ್ಳುಪತ್ತೆ ಪರೀಕ್ಷೆಯನ್ನೂ ನಡೆಸಲಾಗಿತ್ತು.
'ಆರೋಪಿ ಈ ಎರಡು ಪರೀಕ್ಷೆಗಳಿಗೆ ಸಂಪೂರ್ಣ ಸಹಕರಿಸಿದ್ದಾನೆ. ವಿಚಾರಣೆಯಲ್ಲಿ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನೀಡಿದ್ದ ಅದೇ ಪ್ರತಿಕ್ರಿಯೆಗಳನ್ನು ನೀಡಿದ. ಆತನ ಹೇಳಿಕೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಆರೋಪಿ ತನ್ನ ಸಹಜೀವನದ ಸಂಗಾತಿ ಶ್ರದ್ಧಾ ವಾಲಕರ್‌ಳನ್ನು ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, ದೆಹಲಿಯ ಛತರ್‌ಪುರ ಅರಣ್ಯ ಪ್ರದೇಶಗಳಲ್ಲಿ ಮತ್ತು ನಗರದ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾಗಿ ಒಪ್ಪಿಕೊಂಡನು' ಎಂದು ಮೂಲಗಳು ಹೇಳಿವೆ.
'ಶ್ರದ್ಧಾಳ ಡಿಎನ್‌ಎ ವರದಿ ಮುಂದಿನ ವಾರ ಬರುವ ನಿರೀಕ್ಷೆ ಇದೆ. ಆಕೆಯ ಮರಣ ಖಚಿತಪಡಿಸಲು ಮತ್ತು ಕಾರಣ ಪತ್ತೆಗೆ ವೈದ್ಯರಿಗೆ ಒಂದಿಷ್ಟು ನಿರ್ದಿಷ್ಟ ಪ್ರಮಾಣದ ಮೂಳೆಗಳು ಸಾಕು. ಶ್ರದ್ಧಾ ವಾಲಕರ್ ತಲೆ ಬುರುಡೆ ಇದುವರೆಗೂ ಪತ್ತೆಯಾಗಿಲ್ಲ. ಈವರೆಗೆ 13ಕ್ಕೂ ಹೆಚ್ಚು ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಯ ದೇಹದ ಉಳಿದ ಭಾಗಗಳಿಗಾಗಿ ಶೋಧನೆ ಮುಂದುವರಿದಿದೆ. ಆರೋಪಿ ತನ್ನ ಸಹಜೀವನದ ಸಂಗಾತಿಯನ್ನು ಕೊಂದಿರುವುದನ್ನು ಸಾಬೀತುಪಡಿಸಲು ತನಿಖಾ ತಂಡಗಳಿಗೆ ಸಾಕಷ್ಟು ಸಾಕ್ಷ್ಯಗಳು ದೊರೆತಿವೆ' ಎಂದು ಮೂಲಗಳು ಹೇಳಿವೆ.
2 ತಾಸಿನೊಳಗೆ ಮುಗಿದ ಪ್ರಕ್ರಿಯೆ: ಆರೋಪಿ ಆಫ್ತಾಬ್‌ನ ಮಂಪರು ಪರೀಕ್ಷೆ ವಿಶ್ಲೇಷಣೆ ನಂತರದ ಪ್ರಕ್ರಿಯೆ ಶುಕ್ರವಾರ ಎರಡು ತಾಸುಗಳಲ್ಲಿ ಪೂರ್ಣಗೊಂಡಿತು.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಇರಿಸಿರುವ ದೆಹಲಿಯ ತಿಹಾರ್ ಜೈಲಿಗೆ ಬೆಳಿಗ್ಗೆ 11.30ರ ಸುಮಾರಿಗೆ ಆಗಮಿಸಿದ ನಾಲ್ವರು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ತನಿಖಾಧಿಕಾರಿಗಳ ತಂಡವು, ಆಫ್ತಾಬ್ ಜತೆಗೆ 'ಪರೀಕ್ಷೆಗಳ ನಂತರದ ಸಂದರ್ಶನ' (ಪೋಸ್ಟ್- ಟೆಸ್ಟ್ ಇಂಟರ್‌ವ್ಯೂ) ನಡೆಸಿತು. ಗುರುವಾರ ನಡೆಸಿದ್ದ ಮಂಪರು ಪರೀಕ್ಷೆಯಲ್ಲಿ ಮತ್ತು ಅದಕ್ಕೂ ಮೊದಲು ನಡೆಸಿದ್ದ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಆರೋಪಿ ನೀಡಿದ ಹೇಳಿಕೆಗಳನ್ನು ನಿಯಮಾನುಸಾರ ಆತನಿಗೆ ಈ ತಂಡ ತಿಳಿಸಿತು ಎಂದು ಮೂಲಗಳು ಹೇಳಿವೆ.





