HEALTH TIPS

ಎಲ್‌ಎಸಿಯ ಆಚೆಗೆ ಸೇನಾ ಚಟುವಟಿಕೆ ಹೆಚ್ಚಿಸಿದ ಚೀನಾ, ನುಸುಳುವ ಯತ್ನ

 

           ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಭಾರತದ ಭಾಗದಲ್ಲಿ ಭಾರತೀಯ ವಾಯುಪಡೆಯು ಕಣ್ಗಾವಲನ್ನು ಹೆಚ್ಚಿಸಿದೆ. ಎಲ್‌ಎಸಿಯ ಚೀನಾದ ಭಾಗದಲ್ಲಿ ಆ ದೇಶದ ಸೇನೆಯ ಚಟುವಟಿಕೆ ಹೆಚ್ಚಳವಾದ ಕಾರಣ ಭಾರತದ ವಾಯುಪಡೆಯು ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

               ಡಿ. 9ರಂದು ಭಾರತದ ಭೂ‍ಪ್ರದೇಶಕ್ಕೆ ನುಗ್ಗಲು ಚೀನಾದ ಸೈನಿಕರು ಯತ್ನಿಸುವುದಕ್ಕೂ ಮುನ್ನ ಈ ಪ್ರದೇಶದಲ್ಲಿ ಚೀನಾವು ಡ್ರೋನ್‌ಗಳನ್ನು ನಿಯೋಜಿಸಿತ್ತು.

                ತವಾಂಗ್ ವಲಯದ ಯಾಂಗ್‌ತ್ಸೆಯಲ್ಲಿ ಎಲ್‌ಎಸಿಯನ್ನು ದಾಟಿ ಅತಿಕ್ರಮಣ ನಡೆಸಲು ಚೀನಾ ಯತ್ನಿಸಿದೆ. ಆದರೆ ಅದಕ್ಕೆ ಭಾರತದ ಯೋಧರು ದೃಢವಾದ ಪ್ರತ್ಯುತ್ತರ ನೀಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿಗೆ ಮಾಹಿತಿ ಕೊಟ್ಟಿದ್ದಾರೆ. ಚೀನಾ ಸೈನಿಕರು ನುಗ್ಗಲು ಯತ್ನಿಸಿದ್ದರು ಎಂಬ ಮಾಹಿತಿಯನ್ನು ಸೇನೆಯು ಸೋಮವಾರವೇ ಬಹಿರಂಗಪಡಿಸಿತ್ತು.

                  ಎಲ್‌ಎಸಿ ಸಮೀಪದಲ್ಲಿ ಚೀನಾದ ಹಲವು ಡ್ರೋನ್‌ಗಳು ಹಾರಾಟನಡೆಸಿದ್ದರಿಂದಾಗಿ ಭಾರತೀಯ ವಾಯು ಪಡೆಯು ಯುದ್ಧವಿಮಾನಗಳನ್ನು ಆ ಪ್ರದೇಶಕ್ಕೆ ಕಳುಹಿಸಿದೆ. ಯುದ್ಧಸನ್ನದ್ಧತೆಯನ್ನು ಹೆಚ್ಚಿಸಲಾಗಿದೆ. ಈ ಪ್ರದೇಶದಲ್ಲಿನ ಒಟ್ಟಾರೆ ಕಣ್ಗಾವಲನ್ನು ಹೆಚ್ಚಿಸಲಾಗಿದೆ. ವಾಯುಪಡೆಯ ವಿಮಾನಗಳು ಇಲ್ಲಿ ಸುತ್ತಾಡುವುದನ್ನು ಹೆಚ್ಚಿಸಲಾಗಿದೆ.

                 ಡಿ. 9ರ ಘಟನೆಯ ಬಳಿಕ, ವಾಯಪಡೆಯ ಮುಖ್ಯಸ್ಥ ವಿ.ಆರ್‌. ಚೌಧರಿ ಅವರು ವಾಯುಪಡೆಯ ಕಾರ್ಯಾಚರಣೆ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ.

               ತೇಜಪುರವೂ ಸೇರಿದಂತೆ ಪೂರ್ವದ ಗಡಿ ಭಾಗದ ನೆಲೆಗಳಲ್ಲಿ ಯುದ್ಧ ವಿಮಾನಗಳ ಸಂಖ್ಯೆ ಹೆಚ್ಚಿಸಲಾಗಿದೆ. ಅಲ್ಲಿ ಎಸ್‌ಯು-30 ವಿಮಾನಗಳನ್ನು ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ಹಾಸಿಮಾರ ವಾಯುನೆಲೆಯಲ್ಲಿ ರಫೇಲ್‌ ಯುದ್ಧ ವಿಮಾನಗಳ ಒಂದು ತುಕಡಿಯನ್ನು ನಿಯೋಜಿಸಲಾಗಿದೆ. ಪೂರ್ವದ ಗಡಿ ಪ್ರದೇಶದ ಮೇಲೆ ಈ ವಿಮಾನಗಳು ನಿಗಾ ಇರಿಸಿವೆ.

                 'ಅತಿಕ್ರಮಣ ಬೇಡ': ಗಡಿ ಉಲ್ಲಂಘನೆಯ ಪ್ರಯತ್ನದಿಂದ ಚೀನಾವು ದೂರ ಇರಬೇಕು. ಅತಿಕ್ರಮಣ ಪ್ರಯತ್ನಗಳು ಗಡಿ ಪ್ರದೇಶದ ಶಾಂತಿ ಮತ್ತು ನೆಮ್ಮದಿಯನ್ನು ಕದಡುತ್ತವೆ. ಸೇನಾ ಸಂಘರ್ಷದ ವಿಚಾರವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಚೀನಾಕ್ಕೆ ತಿಳಿಸಲಾಗಿದೆ ಎಂದು ರಾಜನಾಥ್ ಸಂಸತ್ತಿಗೆ ತಿಳಿಸಿದ್ದಾರೆ.

                 ರಾಜನಾಥ್ ಅವರು ಸೇನಾ ಪಡೆಗಳ ಮುಖ್ಯಸ್ಥ ಅನಿಲ್‌ ಚೌಹಾಣ್‌, ಭೂಸೇನಾ ಮುಖ್ಯಸ್ಥ ಮನೋಜ್‌ ಪಾಂಡೆ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

                2020ರ ಜೂನ್‌ನಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ ದ್ವಿಪಕ್ಷೀಯ ಸಂಬಂಧವು ಪಾತಾಳಕ್ಕೆ ಇಳಿದಿದೆ. ಅದರ ಬಳಿಕ, ಗಡಿ ಭಾಗಗಳಲ್ಲಿ ಎರಡೂ ದೇಶಗಳು ಸೈನಿಕರ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ. ಯುದ್ಧೋಪಕರಣಗಳನ್ನೂ ಅಲ್ಲಿ ನಿಯೋಜಿಸಿವೆ.

                     ಕಳೆದ 2 ವರ್ಷಗಳಲ್ಲಿ, ಕಣ್ಗಾವಲಿನಲ್ಲಿ ಗಣನೀಯ ಸುಧಾರಣೆ ಆಗಿದೆ, ನಿಗಾ ವ್ಯವಸ್ಥೆಯನ್ನು ಗಟ್ಟಿಗೊಳಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

                                ರಾಜನಾಥ್‌ ಹೇಳಿದ್ದೇನು?

                 ಅರುಣಾಚಲ ಪ್ರದೇಶದ ತವಾಂಗ್‌ ವಲಯದ ಯಾಂಗ್‌ತ್ಸೆ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಯತ್ನಿಸಿದ ಚೀನಾ ಸೇನೆಯ ಪ್ರಯತ್ನವನ್ನು ಭಾರತದ ಸೈನಿಕರು ದಿಟ್ಟವಾಗಿ ತಡೆದಿದ್ದಾರೆ. ಈ ಸಂಘರ್ಷದಲ್ಲಿ ಭಾರತದ ಕಡೆ ಸಾವು ಸಂಭವಿಸಿಲ್ಲ. ಗಂಭೀರವಾದ ಗಾಯಗಳೂ ಆಗಿಲ್ಲ ಎಂದು ಸಂಸತ್ತಿನಲ್ಲಿ ನೀಡಿದ ಹೇಳಿಕೆಯಲ್ಲಿ ರಾಜನಾಥ್‌ ತಿಳಿಸಿದ್ದಾರೆ. ಭಾರತದ ಸೈನಿಕರು ಎದುರಿಸಿದ್ದರಿಂದಾಗಿ ಚೀನಾದ ಸೈನಿಕರು ತಮ್ಮ ನೆಲೆಗಳಿಗೆ ಮರಳಿದರು. ಭಾರತದ ಕಮಾಂಡರ್‌ಗಳ ಸಕಾಲಿಕ ಮಧ್ಯ ಪ್ರವೇಶದಿಂದ ಇದು ಸಾಧ್ಯವಾಗಿದೆ ಎಂದು ರಾಜನಾಥ್‌ ಹೇಳಿದ್ದಾರೆ.

                                     'ಸೂಕ್ಷ್ಮ ವಿಚಾರಕ್ಕೆ ಸ್ಪಷ್ಟನೆ ಇಲ್ಲ'

             ಸೂಕ್ಷ್ಮ ವಿಚಾರಗಳ ಕುರಿತು ಸದನದಲ್ಲಿ ಸ್ಪಷ್ಟೀಕರಣ ನೀಡಲು ಅವಕಾಶ ಇಲ್ಲ ಎಂದು ರಾಜ್ಯಸಭೆಯ ಉಪಸಭಾಪತಿ ಹರಿವಂಶ್‌ ನಾರಾಯಣ ಸಿಂಗ್ ಅವರು ಹೇಳಿದ್ದಾರೆ. ಸೂಕ್ಷ್ಮ ವಿಚಾರಗಳ ಬಗ್ಗೆ ಸ್ಪಷ್ಟೀಕರಣ ನೀಡದ ನಾಲ್ಕು ಪೂರ್ವ ನಿದರ್ಶನಗಳನ್ನು ಉಲ್ಲೇಖಿಸಿದರು.

                                       ಸಂಸತ್ತಿನಲ್ಲಿ ಕೋಲಾಹಲ

               ರಾಜನಾಥ್ ಸಿಂಗ್ ಅವರು ಸಂಘರ್ಷದ ಕುರಿತು ಸಂಸತ್ತಿನಲ್ಲಿ ಹೇಳಿಕೆ ನೀಡಿದ ಕೂಡಲೇ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು. ಆದರೆ, ಅದಕ್ಕೆ ಅವಕಾಶ ಕೊಡದ ಕಾರಣ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries