ನವದೆಹಲಿ: 'ಈ ದೇಶದ ನಾಗರಿಕರಿಗೆ ಸಂಬಂಧಿಸಿದ ಅತಿ ಸೂಕ್ಷ್ಮ ಹಾಗೂ ಖಾಸಗಿ ದತ್ತಾಂಶಗಳ ಸುರಕ್ಷತೆಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆಗ್ರಹಿಸಿದ್ದಾರೆ.
ಹೋದ ತಿಂಗಳು ದೆಹಲಿಯ ಏಮ್ಸ್‌ನ ಸರ್ವರ್‌ಗಳನ್ನು ಗುರಿಯಾಗಿಟ್ಟುಕೊಂಡು ಸೈಬರ್ ದಾಳಿ ನಡೆಸಲಾಗಿತ್ತು. ಈ ಸಂಬಂಧ ದೆಹಲಿ ಪೊಲೀಸ್‌ನ ಗುಪ್ತಚರ ಮತ್ತು ಕಾರ್ಯತಂತ್ರ ವಿಭಾಗವು (ಐಎಫ್‌ಎಸ್‌ಒ) ನವೆಂಬರ್ 25ರಂದು ಸುಲಿಗೆ ಹಾಗೂ ಸೈಬರ್ ಅಪರಾಧ ಆರೋಪದಡಿ ಪ್ರಕರಣ ದಾಖಲಿಸಿತ್ತು.
ಈ ವಿಚಾರವನ್ನು ಸೋಮವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ತರೂರ್, 'ಈ ಕುರಿತು ಸಮಗ್ರ ತನಿಖೆ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಈ ದಾಳಿಯ ಉದ್ದೇಶ ಏನು ಎಂಬುದು ನಿಗೂಢವಾಗಿದೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಒತ್ತಾಯಿಸಿದ್ದಾರೆ.


