ನವದೆಹಲಿ : ಗೋದ್ರಾದಲ್ಲಿ 2002ರಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಿದ್ದ ಪ್ರಕರಣದ ಅಪರಾಧಿಗಳ ಪೈಕಿ ಕೆಲವರು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿರುವುದಕ್ಕೆ ಗುಜರಾತ್ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಶುಕ್ರವಾರ ಈ ಕುರಿತ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು, 'ಅಪರಾಧಿಗಳು ಈಗಾಲೇ 17 ರಿಂದ 18 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ಅವರ ಜಾಮೀನು ಅರ್ಜಿ ಪರಿಗಣಿಸಬಹುದು' ಎಂದು ಹೇಳಿತು.
'ಪ್ರಕರಣದಲ್ಲಿ ಪ್ರತಿಯೊಬ್ಬ ಅಪರಾಧಿಯ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸಿ' ಎಂದೂ ಗುಜರಾತ್ ಸರ್ಕಾರಕ್ಕೆ ಸೂಚಿಸಿತು.
ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಅಪರಾಧಿಗಳು ಕೇವಲ ಕಲ್ಲು ತೂರಾಟಗಾರರಾಗಿರಲಿಲ್ಲ. ಹೊತ್ತಿ ಉರಿಯುತ್ತಿದ್ದ ರೈಲಿನ ಬೋಗಿಯಿಂದ ಪ್ರಯಾಣಿಕರು ತಪ್ಪಿಸಿಕೊಳ್ಳದಂತೆ ತಡೆಯುವುದು ಅವರ ಉದ್ದೇಶವಾಗಿತ್ತು' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
'ಪ್ರಕರಣದಲ್ಲಿ ಪ್ರತಿಯೊಬ್ಬ ಅಪರಾಧಿಯ ಪಾತ್ರವೇನು ಎಂಬುದನ್ನು ಪರಿಶೀಲಿಸಿ ಈ ಕುರಿತ ಮಾಹಿತಿಯನ್ನು ನ್ಯಾಯಾಪೀಠಕ್ಕೆ ಸಲ್ಲಿಸುತ್ತೇನೆ' ಎಂದರು.
ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿತು.





