ನವದೆಹಲಿ: ಧಾರ್ಮಿಕ ಮೆರವಣಿಗೆಗಳ ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸುವಂತೆ ಕೋರಿ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರ ಪೀಠವು, 'ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್' ಎಂಬ ಎನ್‌ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪುರಸ್ಕರಿಸಲು ನಿರಾಕರಿಸಿತು.
'ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯದ ವಿಷಯವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸಮಸ್ಯೆಗಳು ವಿಭಿನ್ನವಾಗಿವೆ. ನ್ಯಾಯಾಲಯವು ಇದನ್ನು ಹೇಗೆ ಮೇಲ್ವಿಚಾರಣೆ ಮಾಡುತ್ತದೆ' ಎಂದು ಪೀಠ ಪ್ರಶ್ನಿಸಿದೆ.
ಎನ್‌ಜಿಒ ಪರ ಹಾಜರಾದ ಹಿರಿಯ ವಕೀಲ ಸಿ.ಯು.ಸಿಂಗ್, ಮೆರವಣಿಗೆಗಳಿಗೆ ಅನುಮತಿ ನೀಡುವ ಮಾರ್ಗಸೂಚಿಗಳಿವೆ. ಆದರೆ, ಅವುಗಳನ್ನು ಕಾರ್ಯಗತಗೊಳಿಸಿಲ್ಲ. ಧಾರ್ಮಿಕ ಹಬ್ಬಗಳ ಸಮಯದಲ್ಲಿ ಖಡ್ಗಗಳು, ಬಂದೂಕುಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೇಳಿದರು.
'ಧಾರ್ಮಿಕ ಹಬ್ಬಗಳು ಗಲಭೆಯ ಸಮಯ ಎಂದು ನಾವು ಏಕೆ ಬಿಂಬಿಸಬೇಕು? ಮಹಾರಾಷ್ಟ್ರದಲ್ಲಿ ಗಣೇಶ ಪೂಜೆ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಆದರೆ, ಯಾವುದೇ ಗಲಭೆಗಳು ನಡೆಯುವುದಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.





