HEALTH TIPS

ಗುಲಾಂ ನಬಿ ಆಜಾದ್ ಅವರ 17 ನಿಷ್ಠಾವಂತರು ಮತ್ತೆ ಕಾಂಗ್ರೆಸ್‌ ಗೆ ಸೇರ್ಪಡೆ!

 

             ನವದೆಹಲಿ: ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದ ಗುಲಾಂ ನಬಿ ಆಜಾದ್ ಅವರ ಡೆಮಾಕ್ರಟಿಕ್ ಆಜಾದ್ ಪಾರ್ಟಿ (ಡಿಎಪಿ) ಗೆ ಸೇರಿದ ಹದಿನೇಳು ನಾಯಕರು ಶುಕ್ರವಾರ ಮತ್ತೆ ತಮ್ಮ ತವರು ಪಕ್ಷ ಕಾಂಗ್ರೆಸ್‌ಗೆ ಮರಳಿದ್ದಾರೆ

                  ಗುಲಾಂ ನಬಿ ಆಜಾದ್‌ ಅವರ ನಿಷ್ಠಾವಂತರು ಎಂದು ಹೇಳಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾ ಚಂದ್, ಜಮ್ಮು ಮತ್ತು ಕಾಶ್ಮೀರದ ಪಿಸಿಸಿ ಮಾಜಿ ಅಧ್ಯಕ್ಷ ಪೀರ್ಜಾದಾ ಮೊಹಮ್ಮದ್ ಸಯೀದ್, ಠಾಕೂರ್ ಬಲ್ವಾನ್ ಸಿಂಗ್ ಸೇರಿದಂತೆ ಇತರ ನಾಯಕರು ಇದೀಗ ಕಾಂಗ್ರೆಸ್ ಸೇರಿದ್ದು, ಆಜಾದ್‌ಗೆ ದೊಡ್ಡ ಹಿನ್ನಡೆಯಾದಂತಾಗಿದೆ. 17 ಮಂದಿಯ ಹೊರತಾಗಿ ಇನ್ನಿಬ್ಬರು ಡಿಎಪಿ ನಾಯಕರು ಶೀಘ್ರದಲ್ಲೇ ಕಾಂಗ್ರೆಸ್‌ಗೆ ಮರು ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷ ತಿಳಿಸಿದೆ.

              ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಎಐಸಿಸಿ ರಾಜ್ಯ ಉಸ್ತುವಾರಿ ರಜನಿ ಪಾಟೀಲ್ ಅವರ ಸಮ್ಮುಖದಲ್ಲಿ ನಾಯಕರು ಪಕ್ಷಕ್ಕೆ ಮರುಸೇರ್ಪಡೆಗೊಂಡರು.

                ನಾಯಕರನ್ನು ಸ್ವಾಗತಿಸಿದ ವೇಣುಗೋಪಾಲ್, 'ಭಾರತ್ ಜೋಡೋ ಯಾತ್ರೆಯು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸುವ ಮೊದಲು ನಾಯಕರು 'ಮನೆ'ಗೆ ಮರಳಿರುವುದು ಪಕ್ಷಕ್ಕೆ ವಿಶೇಷ ಸಂದರ್ಭವಾಗಿದೆ. ಕೆಲವು ತಪ್ಪು ತಿಳಿವಳಿಕೆಯಿಂದ ನಮ್ಮನ್ನು ತೊರೆದಿದ್ದ ಜಮ್ಮು ಮತ್ತು ಕಾಶ್ಮೀರದ ಪಕ್ಷದ ದಿಗ್ಗಜರು ಮತ್ತೆ ಮನೆಗೆ ಮರಳಿದ್ದಾರೆ' ಎಂದರು.

          ಸದ್ಯ ಹರಿಯಾಣ ರಾಜ್ಯಕ್ಕೆ ಪ್ರವೇಶಿಸಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಧ್ವಜಾರೋಹಣದೊಂದಿಗೆ ಮುಕ್ತಾಯಗೊಳ್ಳಲಿದೆ.

                  'ಈ ನಾಯಕರು ಪಕ್ಷದಿಂದ ಎರಡು ತಿಂಗಳು ರಜೆ ತೆಗೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈಗ ಅವರ ರಜೆ ಮುಗಿದು ಮತ್ತೆ ಸೇರಿಕೊಂಡಿದ್ದಾರೆ. ಇದು ಆರಂಭವಷ್ಟೇ. ಇನ್ನೂ ಹೆಚ್ಚಿನ ಜನರು ಪಕ್ಷಕ್ಕೆ ಸೇರುತ್ತಾರೆ ಎಂದು ವೇಣುಗೋಪಾಲ್ ತಿಳಿಸಿದರು.

                      ಕಳೆದ ವರ್ಷ ಆಗಸ್ಟ್‌ನಲ್ಲಿ ಆಜಾದ್ ಕಾಂಗ್ರೆಸ್ ತೊರೆದಿದ್ದರು. ಬಳಿಕ ಹೊಸ ಪಕ್ಷ ಸ್ಥಾಪಿಸಿದ್ದರು.

                  ಸುದ್ದಿಗಾರರೊಂದಿಗೆ ಮಾತನಾಡಿದ ತಾರಾ ಚಂದ್, 'ಕಾಂಗ್ರೆಸ್ ತೊರೆಯುವ ನಿರ್ಧಾರಕ್ಕೆ ವಿಷಾದಿಸುತ್ತೇನೆ. ಅದು ನನಗೆ ಎಲ್ಲವನ್ನೂ ನೀಡಿದೆ. ನನ್ನ ಜೀವನದುದ್ದಕ್ಕೂ ನಾನು ಕಾಂಗ್ರೆಸ್ಸಿಗನಾಗಿದ್ದೆ. ಈ ನಡುವೆ ಆತುರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡೆ. ಕಾಂಗ್ರೆಸ್ ನನಗೆ ಪ್ರಮುಖ ಹುದ್ದೆಗಳನ್ನು ನೀಡಿತು ಮತ್ತು ಅದು ನನಗೆ ಹೆಸರನ್ನು ನೀಡಿತು. ಇದು ನನ್ನ ಜೀವನದಲ್ಲಿ ನಡೆದ ದೊಡ್ಡ ಪ್ರಮಾದ' ಎಂದು ಹೇಳಿದರು.

                 ಆಜಾದ್ ಅವರು ತಾರಾ ಚಂದ್, ಬಲ್ವಾನ್ ಸಿಂಗ್ ಮತ್ತು ಡಾ. ಮನೋಹರ್ ಲಾಲ್ ಅವರನ್ನು ಕಾಂಗ್ರೆಸ್ ಜೊತೆಗಿನ ಸಾಮೀಪ್ಯಕ್ಕಾಗಿ ಪಕ್ಷದಿಂದ ಹೊರಹಾಕಿದ್ದರು.

                ಆಜಾದ್ ಕಾಂಗ್ರೆಸ್ ತೊರೆಯಲು ಕಾರಣವೇನೆಂದು ನನಗೆ ತಿಳಿದಿಲ್ಲ. ಡಿಎಪಿ ಸೇರಿದ ನಂತರ ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಹೀಗಾಗಿ ಜಾತ್ಯತೀತ ಶಕ್ತಿಗಳು ಒಂದಾಗುವ ಅವಶ್ಯಕತೆಯಿದೆ. ಇದು ತಪ್ಪು ತಿರುವು ಪಡೆದು ನಮ್ಮನ್ನು ತಪ್ಪು ಜಾಗಕ್ಕೆ ಕೊಂಡೊಯ್ಯುವ ಯತ್ನ ನಡೆದಿದೆ. ಅದಕ್ಕಾಗಿಯೇ ಮತ್ತೆ ನಾವು ಕಾಂಗ್ರೆಸ್‌ಗೆ ಬಂದಿದ್ದೇವೆ' ಎಂದು ಅವರು ಹೇಳಿದರು.

              ಕಾಂಗ್ರೆಸ್ ತೊರೆದಿದ್ದಕ್ಕಾಗಿ ಕಾಶ್ಮೀರ, ಭಾರತ ಮತ್ತು ಕಾಂಗ್ರೆಸ್‌ನ ಜನರಿಂದ ಕ್ಷಮೆಯಾಚಿಸಿದ ಪೀರ್ಜಾದಾ, ಇದು ತಪ್ಪು ನಿರ್ಧಾರ. ಕಾಂಗ್ರೆಸ್ ಜೊತೆಗಿನ ನನ್ನ 50 ವರ್ಷಗಳ ಒಡನಾಟದ ನಂತರ ನಾನು ತಪ್ಪು ಹೆಜ್ಜೆ ಇಟ್ಟಿದ್ದಕ್ಕಾಗಿ ಎಲ್ಲರಿಂದಲೂ ಒತ್ತಡಕ್ಕೆ ಒಳಗಾಗಿದ್ದರಿಂದ ಕಳೆದ ಎರಡು ತಿಂಗಳಿನಿಂದ ನಾನು ನಿದ್ದೆ ಮಾಡಿಲ್ಲ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries