ಎರ್ನಾಕುಳಂ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಅಭ್ಯರ್ಥಿಗೆ ಲಂಚ ನೀಡಿದ ಆರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ವಿರುದ್ಧ ಕ್ಷ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.
ಕೆ. ಸುರೇಂದ್ರನ್ ಒಂದನೇ ಆರೋಪಿಯಾಗಿರುವ ಈ ಪ್ರಕರಣದ ಬಗ್ಗೆ ಕಾಸರಗೋಡು ಜಿಲ್ಲಾ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಕೆ. ಸುರೇಂದ್ರನ್ ಸೇರಿದಂತೆ ಆರು ಮಂದಿ ಆರೋಪಿಗಳಿದ್ದಾರೆ. ಕೆ. ಸುರೇಂದ್ರನ್ ವಿರುದ್ಧ ಜಾಮೀನುರಹಿತ ಅಪರಾಧ ಹೇರಲಾಗಿದೆ. ಸುರೇಂದ್ರನ್ ಅವರ ಮುಖ್ಯ ಚುನಾವಣಾಧಿಕಾರಿಯಾಗಿದ್ದ ವಿ.ಬಾಲಕೃಷ್ಣ ಶೆಟ್ಟಿ, ಯುವಮೋರ್ಚಾ ಮುಖಂಡ ಸುನಿಲ್ ನಾಯ್ಕ್, ವೈ ಸುರೇಶ್, ಮಣಿಕಂಠ ರೈ, ಲೋಕೇಶ್ ನೋಂಡ ಎಂಬವರು ಇತರ ಆರೋಪಿಗಳಾಗಿದ್ದಾರೆ.
ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ಅವರು ಅಭ್ಯರ್ಥಿತನದಿಂದ ಹಿಂದಕ್ಕೆ ಸರಿಯಲು ಎರಡುವರೆ ಲಕ್ಷ ರಊ. ಹಾಗೂ ಒಂದು ಸ್ಮಾರ್ಟ್‍ಫೋನ್ ನೀಡಿರುವುದಲ್ಲದೆ, ಬೆದರಿಕೆಯೊಡ್ಡಿರುವುದಾಗಿ ಕೇಸು ದಾಖಲಾಗಿತ್ತು. ಎಡರಂಗದ ಅಭ್ಯರ್ಥಿಯಾಗಿದ್ದ ವಿ.ವಿ ರಮೇಶನ್ 2021 ಜೂನ್ ತಿಂಗಳಲ್ಲಿ ನೀಡಿದ ದೂರಿನ ಮೇರೆಗೆ ಈ ಕೇಸು ದಾಖಲಾಗಿತ್ತು.
ಅಭ್ಯರ್ಥಿಗೆ ಲಂಚ, ಬೆದರಿಕೆಯ ಆರೋಪ: ಬಿಜೆಪಿ ಮುಖಂಡ ಸುರೇಂದ್ರನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
0
ಜನವರಿ 11, 2023
Tags





