HEALTH TIPS

ಮಹಾರಾಷ್ಟ್ರ ಪತ್ರಕರ್ತನ ಹತ್ಯೆ ಪ್ರಕರಣ: ಸಿಟ್ ತನಿಖೆಗೆ ಫಡ್ನವೀಸ್ ಆದೇಶ

 

               ಮುಂಬೈ: ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಹಾಗೂ ಗೃಹಸಚಿವ ದೇವೇಂದ್ರ ಫಡ್ನವೀಸ್(Devendra Fadnavis) ಅವರು ರತ್ನಾಗಿರಿ ಜಿಲ್ಲೆಯ ರಾಜಾಪುರದ ಪತ್ರಕರ್ತ ಶಶಿಕಾಂತ ವಾರಿಶೆ ಅವರ ಹತ್ಯೆ ಕುರಿತು ವಿಶೇಷ ತನಿಖಾ ತಂಡ (ಸಿಟ್)ದಿಂದ ತನಿಖೆಗೆ ಶನಿವಾರ ಆದೇಶಿಸಿದ್ದಾರೆ.

                    ವಾರಿಶೆ ಹತ್ಯೆ ಕುರಿತು ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಯೋರ್ವರ ನೇತೃತ್ವದಲ್ಲಿ ಸಿಟ್ ರಚಿಸುವಂತೆ ಮತ್ತು ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಫಡ್ನವೀಸ್ ಸೂಚಿಸಿದ್ದಾರೆ.

               ರಿಯಲ್ ಎಸ್ಟೇಟ್ ಉದ್ಯಮಿ ಪಂಡರಿನಾಥ ಅಂಬೇರ್ಕರ್(Pandarinath Amberkar) ಚಲಾಯಿಸುತ್ತಿದ್ದ ಥಾರ್ ವಾಹನ ವಾರಿಶೆ (48) ಅವರಿಗೆ ಢಿಕ್ಕಿ ಹೊಡೆದಿತ್ತು ಮತ್ತು ಕೆಲವು ಮೀಟರ್‌ವರೆಗೆ ಅವರನ್ನು ಎಳೆದೊಯ್ದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಲ್ಲಿಯೇ ಬಿಟ್ಟು ವಾಹನವು ಪರಾರಿಯಾಗಿತ್ತು. ಸ್ಥಳೀಯರು ವಾರಿಶೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು,ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.

                     ಮಹಾನಗರಿ ಟೈಮ್ಸ್ ಮರಾಠಿ ದೈನಿಕದಲ್ಲಿ ಕೆಲಸ ಮಾಡುತ್ತಿದ್ದ ವಾರಿಶೆ ಜಿಲ್ಲೆಯ ಬಾರ್ಸು ಗ್ರಾಮದಲ್ಲಿ ಉದ್ದೇಶಿತ ರತ್ನಾಗಿರಿ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿ.ಸ್ಥಾವರಕ್ಕೆ ಸಂಬಂಧಿಸಿದಂತೆ ವ್ಯಾಪಕ ವರದಿಗಳನ್ನು ಮಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕೊಂಕಣ ಪ್ರದೇಶದಲ್ಲಿ ಮಾಲಿನ್ಯವುಂಟಾಗುವ ಭೀತಿಯಿಂದ ಹೆಚ್ಚಿನ ಸ್ಥಳೀಯರು ರಿಫೈನರಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.

                    ಅಂಬೇರ್ಕರ್ ಮತ್ತು ಅವರ ದುರ್ವ್ಯವಹಾರಗಳ ವಿರುದ್ಧ ವಾರಿಶೆ ಹಲವಾರು ಲೇಖನಗಳನ್ನು ಬರೆದಿದ್ದರು. ಪ್ರಧಾನಿ,ಮುಖ್ಯಮಂತ್ರಿ ಮತ್ತು ಫಡ್ನವೀಸ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆನ್ನಲಾಗಿರುವ ಅಂಬೇರ್ಕರ್‌ರನ್ನು ಈ ಲೇಖನಗಳು ಕೆರಳಿಸಿದ್ದವು ಎಂದು ಹೇಳಲಾಗಿದೆ. ಹೀಗಾಗಿ ವಾರಿಶೆ ಹತ್ಯೆಗೆ ಅವರು ಸಂಚು ರೂಪಿಸಿದ್ದರು ಎಂದು ಆರೋಪಿಸಿಲಾಗಿದೆ. ಹತ್ಯೆಯ ಬಳಿಕ ಅಂಬೇರ್ಕರ್ ಸ್ಥಳದಿಂದ ಪರಾರಿಯಾಗಿದ್ದರು.

                    ಈ ನಡುವೆ ಶನಿವಾರ ಪ್ರತಿಪಕ್ಷಗಳು ಫಡ್ನವೀಸ್ ವಿರುದ್ಧ ದಾಳಿಯನ್ನು ತೀವ್ರಗೊಳಿಸಿವೆ.

                   ರಾಜ್ಯದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ದೂರಿ ಪತ್ರವೊಂದನ್ನು ಬರೆದಿರುವ ಶಿವಸೇನೆ ನಾಯಕ ಸಂಜಯ್ ರಾವುತ್(Sanjay Raut) ಅವರು,ಪತ್ರಕರ್ತರನ್ನು ಹಾಡಹಗಲೇ ಕೊಲ್ಲಲಾಗುತ್ತಿದೆ. ಆರೋಪಿಯು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ(Eknath Shinde) ಬಣಕ್ಕೆ ಮತ್ತು ಬಿಜೆಪಿ ನಾಯಕರಿಗೆ ಆಪ್ತನಾಗಿದ್ದಾನೆ ಎನ್ನಲಾಗಿದೆ ಎಂದು ಹೇಳಿದ್ದಾರೆ.

                  ಪ್ರಕರಣದ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿರುವ ಪ್ರತಿಪಕ್ಷ ನಾಯಕ ಅಜಿತ್ ಪವಾರ್(Ajit Pawar) ಅವರು,ರಾಜ್ಯ ಸರಕಾರವು ತನಿಖೆಯನ್ನು ವಿಳಂಬಿಸಬಹುದು ಎಂದು ಶಂಕಿಸಿದ್ದಾರೆ. ತಪ್ಪಿತಸ್ಥ ವ್ಯಕ್ತಿಗೆ ಶಿಕ್ಷಯಾಗಲೇಬೇಕು. ಇಷ್ಟು ದೊಡ್ಡ ಘಟನೆ ನಡೆದಿದೆ,ಪೊಲೀಸರೇನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

                  ಪೊಲೀಸರು ಅಂಬೇರ್ಕರ್ ವಿರುದ್ಧ ಐಪಿಸಿಯ ಕಲಂ 304 (ಕೊಲೆಯಲ್ಲದ ನರಹತ್ಯೆ)ರಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಮೊದಲು ಆರೋಪಿಯ ವಿರುದ್ಧ ಈ ಕಲಮ್‌ನಡಿ ಆರೋಪ ಹೊರಿಸಲು ನಿರಾಕರಿಸಿದ್ದ ಪೊಲೀಸರು ಪತ್ರಕರ್ತರ ಸಂಘಗಳು ಮತ್ತು ಎನ್‌ಜಿಒಗಳ ಒತ್ತಡದ ಬಳಿಕ ಕಲಮ್‌ನ್ನು ಬದಲಿಸಿದ್ದಾರೆ.

                  ಇದಕ್ಕೂ ಮುನ್ನ ಮಾಧ್ಯಮ ಸಂಘಟನೆಗಳು ಫಡ್ನವೀಸ್‌ರನ್ನು ಭೇಟಿಯಾಗಿ ತನಿಖೆಗೆ ಆಗ್ರಹಿಸಿದ್ದವು. ಆರೋಪಿಯ ವಿರುದ್ಧ ಮಹಾರಾಷ್ಟ್ರ ರಾಜ್ಯ ಸಂಘಟಿತ ಅಪರಾಧ ಕಾಯ್ದೆ (ಎಂಕೋಕಾ)ಯಡಿ ಆರೋಪವನ್ನು ದಾಖಲಿಸಬೇಕು ಎಂದು ಆಗ್ರಹಿಸಿ ಮಂತ್ರಾಲಯದ ಬಳಿ ಪ್ರತಿಭಟನೆಯನ್ನು ನಡೆಸಿದ್ದವು. ವಾರಿಶೆ ಕುಟುಂಬಕ್ಕೆ 50 ಲ.ರೂ.ಗಳ ನೆರವು ನೀಡುವಂತೆ ಮತ್ತು ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಅಂಗೀಕರಿಸುವಂತೆ ಅವು ಸರಕಾರವನ್ನು ಆಗ್ರಹಿಸಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries