ವಾಷಿಂಗ್ಟನ್: ಅಮೆರಿಕದ ವಾಯುಗಡಿಯ ಪರಿಮಿತಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಮೂರು ಅಪರಿಚಿತ ವಸ್ತುಗಳನ್ನು ಹೊಡೆದುರುಳಿಸಿದ್ದ ಕ್ರಮವನ್ನು ಶ್ವೇತಭವನವು ಬಲವಾಗಿ ಸಮರ್ಥಿಸಿಕೊಂಡಿದೆ.
ಆದರೆ, ಹಿಂದೆ ಅತಿ ಎತ್ತರದಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬಲೂನ್ ರೀತಿಯಂತೇ ಅಪರಿಚಿತ 'ವಸ್ತು'ಗಳು ಕಣ್ಗಾವಲು ಉದ್ದೇಶ ಹೊಂದಿದ್ದವೇ ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಹೊಡೆದುರುಳಿಸಿದ್ದ 'ವಸ್ತು' ಸೇರಿದಂತೆ ಮೂರು ವಸ್ತುಗಳು, ನಾಗರಿಕ ವಿಮಾನಗಳ ಸಂಚಾರಕ್ಕೆ ಅಡ್ಡಿ ಆಗುವಂತೆ ಕೆಳಹಂತದಲ್ಲಿ ಚಲನೆಯಲ್ಲಿದ್ದವು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ ಹೇಳಿದ್ದಾರೆ.
ಇದರ ಹೊರತಾಗಿ ಈ ಶಂಕಾಸ್ಪದ ವಸ್ತುಗಳು ಚೀನಾಕ್ಕೇ ಸೇರಿದ್ದವು ಅಥವಾ ಅವುಗಳಿಗೆ ಕಣ್ಗಾವಲು ಉದ್ದೇಶದ ಪರಿಕರ ಅಳವಡಿಸಲಾಗಿತ್ತು ಎಂಬುದಕ್ಕೆ ಸಾಕ್ಷ್ಯವಿಲ್ಲ. ಇಂಥ ಸಾಧ್ಯತೆ ತಳ್ಳಿಹಾಕುವುದಿಲ್ಲ ಎಂದು ತಿಳಿಸಿದ್ದಾರೆ.
ಶಂಕಾಸ್ಪದವಾಗಿ ಚಲನೆಯಲ್ಲಿದ್ದ ವಸ್ತುಗಳನ್ನು ಹೊಡೆದುರುಳಿಸುವ ನಿರ್ಧಾರ ಪೂರ್ಣವಾಗಿ ಅಮೆರಿಕನ್ನರ ಹಿತಾಸಕ್ತಿ, ಸುರಕ್ಷತೆ ಗಮನಿಸಿಯೇ ಕೈಗೊಳ್ಳಲಾಗಿತ್ತು ಎಂದು ಕಿರ್ಬಿ ತಿಳಿಸಿದ್ದಾರೆ.
ಮೂಲ ಪತ್ತೆಗೆ ಕ್ರಮ: ಇನ್ನೊಂದೆಡೆ ಶಂಕಾಸ್ಪದ ವಸ್ತುಗಳ ಮೂಲ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಚೀನಾ ದೊಡ್ಡ ಪ್ರಮಾಣದಲ್ಲಿ, ಬಾನಂಗಳದಿಂದ ಕಣ್ಗಾವಲು ಯೋಜನೆ ಹೊಂದಿದೆ ಎಂದಿರುವ ಅಧಿಕಾರಿಗಳು, ಈಗ ಪತ್ತೆ ಆದ ಶಂಕಾಸ್ಪದ ವಸ್ತುಗಳ ಹಿಂದೆಯೂ ಚೀನಾ ಇದೆ ಎಂಬುದನ್ನು ದೃಢಪಡಿಸಿಕೊಳ್ಳಲು ಒತ್ತು ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಯುಕೊನ್ ಪರಿಮಿತಿಯಲ್ಲಿ ಶನಿವಾರ ಹೊಡೆದುರುಳಿಸಿದ್ದ ಬಲೂನ್, ಶಾಲಾ ವಾಹನದ ಗಾತ್ರಕ್ಕಿಂತಲೂ ತುಸು ಚಿಕ್ಕದಾಗಿತ್ತು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ. ಆದರೆ, ಉಳಿದ ಎರಡು ಶಂಕಾಸ್ಪದ ವಸ್ತುಗಳ ಮೂಲ ಯಾವ ರಾಷ್ಟ್ರದ್ದು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಖಚಿತತೆ ಇಲ್ಲ.
ಚೀನಾದ ಗುಪ್ತಚರ ಸಾಮರ್ಥ್ಯ ಅಂದಾಜು -ಜೋ ಬೈಡನ್ ಸೂಚನೆ
ಚೀನಾದ ಗೂಢಚಾರಿಕೆಯ ಸಾಮರ್ಥ್ಯವನ್ನು ಅಂದಾಜಿಸುವಂತೆ ದೇಶದ ಗುಪ್ತಚರ ಅಧಿಕಾರಿಗಳಿಗೆ ಅಧ್ಯಕ್ಷ ಜೋ ಬೈಡನ್ ಅವರು ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಆದೇಶಿಸಿದ್ದರು.
ಅಮೆರಿಕದ ವಾಯುಗಡಿ ಪರಿಮಿತಿಯಡಿ ಎತ್ತರ ಪ್ರದೇಶದಲ್ಲಿ ಕಣ್ಗಾವಲು ಬಲೂನ್ ಹಾರಾಟ ಪತ್ತೆ ಹಿನ್ನೆಲೆಯಲ್ಲಿ ಶ್ವೇತಭವನ ಈ ಮಾಹಿತಿ ನೀಡಿದೆ. ಚೀನಾದ ಗೂಢಚಾರಿಕೆ ಸಾಮರ್ಥ್ಯ ಅಂದಾಜಿಸಬೇಕು ಹಾಗೂ ಅದರಿಂದ ದೇಶದ ರಕ್ಷಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದ್ದರು ಎಂದು ಜಾನ್ ಕಿರ್ಬಿ ಅವರು ತಿಳಿಸಿದರು.
ವಿದೇಶಗಳ ಗುಪ್ತದಳ ಮಾಹಿತಿ ಸಂಗ್ರಹ ಸಾಮರ್ಥ್ಯದ ಅಂದಾಜು, ಅದನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮ ಕುರಿತು ಹೆಚ್ಚನ ವಿವರ ನೀಡಲಾಗದು. ಚೀನಾವು ಮಾಹಿತಿ ಕಲೆಹಾಕಲು ಅತಿ ಎತ್ತರದ ಪ್ರದೇಶದಲ್ಲಿ ಕಣ್ಗಾವಲು ಬಲೂನ್ ಹಾರಿಬಿಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಗುರುತಿಸಿದ್ದೇವೆ ಎಂದರು.





