ನವದೆಹಲಿ: ಪುಲ್ವಾಮಾ ದಾಳಿಗೆ ನಾಲ್ಕು ವರ್ಷ ಗತಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಷ್ಟ್ರವು ಮಂಗಳವಾರ ಹುತಾತ್ಮ ಸಿಆರ್‌ಪಿಎಫ್ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿತು.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, 'ಪುಲ್ವಾಮಾದಲ್ಲಿ ಇದೇ ದಿನ ಹುತಾತ್ಮರಾದ ನಮ್ಮ ಪರಾಕ್ರಮಿ ಯೋಧರನ್ನು ನಾವು ನೆನಪಿಸಿಕೊಳ್ಳುತ್ತೇವೆ.
ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ಬಲಿಷ್ಠ ಹಾಗೂ ಅಭಿವೃದ್ಧಿಯ ಭಾರತ ನಿರ್ಮಾಣಕ್ಕೆ ಪ್ರೇರೇಪಿಸುತ್ತದೆ' ಎಂದು ತಿಳಿಸಿದ್ದಾರೆ.
2019ರಲ್ಲಿ ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬರ್‌ವೊಬ್ಬ ತನ್ನ ವಾಹನವನ್ನು ಸಿಆರ್‌ಪಿಎಫ್ ಬೆಂಗಾವಲು ಪಡೆಯ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ ಪರಿಣಾಮವಾಗಿ 40 ಯೋಧರು ಮೃತಪಟ್ಟಿದ್ದರು.
ಹುತಾತ್ಮ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಗೌರವ ಸಲ್ಲಿಸಿದ್ದಾರೆ.
'2019ರಲ್ಲಿ ಸಂಭವಿಸಿದ ಪುಲ್ವಾಮಾ ದಾಳಿಯಲ್ಲಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಇಡೀ ದೇಶವೇ ಅವರಿಗೆ ಗೌರವ ನಮನ ಸಲ್ಲಿಸುತ್ತದೆ. ಹುತಾತ್ಮ ಯೋಧರ ಕುಟುಂಬಗಳೊಂದಿಗೆ ಇಡೀ ದೇಶವೇ ನಿಲ್ಲುತ್ತದೆ' ಎಂದು ರಾಜನಾಥ್ ಅವರು ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಹ ಹುತಾತ್ಮ ಯೋಧರಿಗೆ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದು, 'ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ನಮ್ಮ ಧೈರ್ಯವಂತ ಸೈನಿಕರಿಗೆ ನಮನಗಳು. ನಮ್ಮ ಜಾಗರೂಕತೆಯನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸುತ್ತೇವೆ' ಎಂದು ಹೇಳಿದ್ದಾರೆ.
ಹುತಾತ್ಮರಿಗೆ ಸಿಆರ್‌ಪಿಎಫ್‌ನಿಂದ ಶ್ರದ್ಧಾಂಜಲಿ
ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರ : ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸಿಆರ್‌ಪಿಎಫ್ ಬೆಂಗಾವಲು ಪಡೆಯ 40 ಹುತಾತ್ಮರಿಗೆ ಸಿಆರ್‌ಪಿಎಫ್ ಹಾಗೂ ಇತರ ಭದ್ರತಾ ಪಡೆಗಳು ಇಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಿದವು.
ಸಿಆರ್‌ಪಿಎಫ್‌ನ ವಿಶೇಷ ಮಹಾನಿರ್ದೇಶಕ ದಲ್‌ಜಿತ್ ಸಿಂಗ್ ಚೌಧರಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಆರ್‌ಪಿಎಫ್‌ನ ಇತರ ಅಧಿಕಾರಿಗಳು, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಸೇನೆಯ ಅಧಿಕಾರಿಗಳು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.
'ನಮ್ಮ 40 ಧೈರ್ಯಶಾಲಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ದೇಶವನ್ನು ಭಯೋತ್ಪಾದನಾ ಮುಕ್ತವನ್ನಾಗಿ ಮಾಡಲು ಅವರ ತ್ಯಾಗ ನಮ್ಮನ್ನು ಪ್ರೇರೇಪಿಸುತ್ತದೆ' ಎಂದು ದಲ್‌ಜಿತ್ ಸಿಂಗ್ ಚೌಧರಿ ಅವರು ಹೇಳಿದರು.
ಈ ವೇಳೆ, ಸೇನೆಯ 15 ಕೋರ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಎ.ಎಸ್. ಔಜ್ಲಾ, ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್, ಸಿಆರ್‌ಪಿಎಫ್‌ನ ಐಜಿ (ಕಾರ್ಯಾಚರಣೆ ವಿಭಾಗ) ಎಂ.ಎಸ್. ಭಾಟಿಯಾ, ದಕ್ಷಿಣ ಕಾಶ್ಮೀರದ ಡಿಐಜಿ ರಂಗೆ ರಾಯೀಸ್ ಭಟ್ ಹಾಗೂ ಇತರರು ಇದ್ದರು.





