ನವದೆಹಲಿ: ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಪ್ರಕಟಿಸಿದ ವರದಿಯಲ್ಲಿ ಮಾಡಿರುವ ವಂಚನೆ ಕುರಿತ ಆರೋಪಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅಲ್ಲದೇ, ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಯಾವುದಾದರೂ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಷೇರು ಮಾರುಕಟ್ಟೆ ನಿಯಂತ್ರಕ 'ಸೆಬಿ' ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ತಡೆರಹಿತ ವಹಿವಾಟು ಖಾತ್ರಿಪಡಿಸಿಕೊಳ್ಳಲು ಮತ್ತು ಸ್ಟಾಕ್ ಎಕ್ಸ್‌ಚೇಂಜ್‌ಗಳ ಅಸ್ಥಿರತೆ ಎದುರಿಸಲು ಸದೃಢವಾದ ಚೌಕಟ್ಟುಗಳು ಹಾಗೂ ಮಾರುಕಟ್ಟೆ ವ್ಯವಸ್ಥೆಗಳು ಇವೆ. ಷೇರು ಮಾರುಕಟ್ಟೆಯಲ್ಲಿ ಸೀಮಿತ ಅವಧಿಯ ಮಾರಾಟ ಬೆಳವಣಿಗೆಯನ್ನು ಜಗತ್ತಿನಾದ್ಯಂತ 'ಕಾನೂನುಬದ್ಧ ಹೂಡಿಕೆ ಚಟುವಟಿಕೆ' ಎಂದೇ ಗುರುತಿಸಲಾಗುತ್ತದೆ ಎಂದು ಸೆಬಿಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಪೀಠಕ್ಕೆ ಸೆಬಿಯು 23 ಪುಟಗಳ ಲಿಖಿತ ಹೇಳಿಕೆಯನ್ನು ಸೋಮವಾರ ಸಲ್ಲಿಸಿದೆ.
ಹಿಂಡನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿದು, ಹೂಡಿಕೆದಾರರಿಗೆ ಆದ ನಷ್ಟದ ಬಗ್ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
'ಹಿಂಡನ್‌ಬರ್ಗ್ ವರದಿಯಲ್ಲಿರುವ ಆರೋಪಗಳು ಮತ್ತು ವರದಿಯ ಪ್ರಕಟಣೆಗೆ ಮೊದಲು ಮತ್ತು ನಂತರದಲ್ಲಿ ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ಸೆಬಿಯ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ, ಹಾಗೆಯೇ ಯಾವುದಾದರೂ ಅಕ್ರಮಗಳು ನಡೆದಿದೆಯೇ ಎನ್ನುವುದರ ಪತ್ತೆಗೂ ವಿಚಾರಣೆ ನಡೆಯುತ್ತಿದೆ' ಎಂದು ಸೆಬಿಯು, ಪೀಠಕ್ಕೆ ತಿಳಿಸಿದೆ.
ಅದಾನಿ ಸಮೂಹದ ಷೇರುಗಳ ಇತ್ತೀಚಿನ ಕುಸಿತದಿಂದಾಗಿ ಷೇರು ಮಾರುಕಟ್ಟೆಯ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟು ಮಾಡಿಲ್ಲ. ಭಾರತೀಯ ಷೇರು ಮಾರುಕಟ್ಟೆಗಳು ಈ ಹಿಂದೆಯೂ ಹೆಚ್ಚಿನ ಪ್ರಕ್ಷುಬ್ಧ ಸನ್ನಿವೇಶ ಎದುರಿಸಿವೆ. ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದಲ್ಲಿ 2020ರ ಮಾರ್ಚ್ 2ರಿಂದ ಮಾರ್ಚ್ 19ರವರೆಗಿನ (13 ವಹಿವಾಟು ದಿನಗಳು) ಅವಧಿಯಲ್ಲಿ ನಿಫ್ಟಿ ಶೇ 26 ರಷ್ಟು ಕುಸಿದಿತ್ತು. ಹೆಚ್ಚಿದ ಮಾರುಕಟ್ಟೆ ಅಸ್ಥಿರತೆಯ ದೃಷ್ಟಿಯಿಂದ, 2020ರ ಮಾರ್ಚ್ 20ರಂದು ಸೆಬಿಯು ಜಾರಿಯಲ್ಲಿರುವ ತನ್ನ ಮಾರುಕಟ್ಟೆ ಕಾರ್ಯವಿಧಾನಗಳನ್ನು ಪರಿಷ್ಕರಿಸಿ, ಕೆಲವು ಬದಲಾವಣೆಗಳನ್ನು ಮಾಡಿತ್ತು ಎಂದು ಸೆಬಿಯು, ಪೀಠಕ್ಕೆ ತಿಳಿಸಿದೆ.
'ಈ ವಿಷಯವು ವಿಚಾರಣೆಯ ಪ್ರಾರಂಭಿಕ ಹಂತದಲ್ಲಿದೆ. ಪ್ರಗತಿಯಲ್ಲಿರುವ ವಿಚಾರಣೆಯ ಬಗ್ಗೆ ವಿವರಗಳನ್ನು ಈ ಹಂತದಲ್ಲಿ ಪಟ್ಟಿ ಮಾಡುವುದು ಸೂಕ್ತವಲ್ಲ' ಎಂದು ಸೆಬಿ ಹೇಳಿದೆ.





