HEALTH TIPS

ನೀವು ಎಷ್ಟು ಬ್ಯಾಂಕ್ ಖಾತೆ ಹೊಂದಿರಬೇಕು?

 

ನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಿಂದಾಗಿ ಹೊಸ ಖಾತೆ ಆರಂಭಿಸುವುದು ಸಲೀಸಾಗಿದೆ. ಆಧಾರ್ ನೀಡಿದರೆ ಸಾಕು, ಕುಳಿತಲ್ಲೇ ಬ್ಯಾಂಕ್ ಖಾತೆ ತೆರೆಯಬಹುದು. ನಾವು ತಿಳಿದೋ ತಿಳಿಯದೆಯೋ ಹಲವು ಬ್ಯಾಂಕ್ ಖಾತೆಗಳನ್ನು ತೆರೆದು ಬಳಸಲು ಶುರು ಮಾಡುತ್ತೇವೆ. ವಾಸ್ತವದಲ್ಲಿ ಎಷ್ಟು ಬ್ಯಾಂಕ್ ಖಾತೆಗಳಿದ್ದರೆ ಒಳ್ಳೆಯದು ಎಂಬ ನಿರ್ಣಯವನ್ನೇ ತೆಗೆದುಕೊಳ್ಳದೆ ಮುಂದುವರಿದಿರುತ್ತೇವೆ.

ಹಾಗಾದರೆ ಎಷ್ಟು ಬ್ಯಾಂಕ್ ಖಾತೆಗಳಿದ್ದರೆ ಉತ್ತಮ?

ಹಲವು ಬ್ಯಾಂಕ್ ಖಾತೆಗಳು ಹೇಗೆ ಸೃಷ್ಟಿಯಾಗುತ್ತವೆ?: ಈಗಾಗಲೇ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಲ್ಲೊಂದು ಬ್ಯಾಂಕ್ ಖಾತೆ ಇರುತ್ತದೆ. ಆ ಕೆಲಸ ತೊರೆದು ಮತ್ತೊಂದು ಕೆಲಸಕ್ಕೆ ಸೇರಿದಾಗ ಅಲ್ಲಿ ಬೇರೆ ವೇತನ ಖಾತೆ ತೆರೆಯಬೇಕಾಗಬಹುದು. ಹೀಗೆ ಹಲವು ಕಾರಣಗಳಿಂದಾಗಿ ಒಂದರ ಮೇಲೊಂದು ಖಾತೆಗಳು ಸೃಷ್ಟಿಯಾಗುತ್ತವೆ. ಕೆಲವರು ಡಿ-ಮ್ಯಾಟ್ ಖಾತೆಗಾಗಿ ಒಂದು ಪರ್ಯಾಯ ಬ್ಯಾಂಕ್ ಖಾತೆ ಹೊಂದಿರುತ್ತಾರೆ. ಇನ್ನಷ್ಟು ಮಂದಿ, ಗೃಹ ಸಾಲ, ವಾಹನ ಸಾಲ ಹೀಗೆ ಬೇರೆ ಬೇರೆ ಕಾರಣಗಳಿಗೆ ಖಾತೆಗಳನ್ನು ತೆರೆದಿರುತ್ತಾರೆ.

ಹೆಚ್ಚು ಖಾತೆಗಳಿದ್ದರೆ ಅನುಕೂಲವೇನು?

1. ಹಣಕ್ಕೆ ಹೆಚ್ಚು ಸುರಕ್ಷತೆ : ಬ್ಯಾಂಕಿನಲ್ಲಿ ನೀವು ಎಷ್ಟೇ ಹಣ ಇಟ್ಟಿದ್ದರೂ ₹ 5 ಲಕ್ಷದವರೆಗೆ ಮಾತ್ರ ವಿಮೆಯ ರಕ್ಷೆ ಇರುತ್ತದೆ. ಒಂದೊಮ್ಮೆ ಬ್ಯಾಂಕ್ ದಿವಾಳಿಯಾದರೆ ₹ 5 ಲಕ್ಷಕ್ಕಿಂತ ಹೆಚ್ಚಿನ ಹಣಕ್ಕೆ ರಕ್ಷೆ ಇರುವುದಿಲ್ಲ. ಹೀಗಿರುವಾಗ ಹೆಚ್ಚು ಬ್ಯಾಂಕ್ ಖಾತೆಗಳಿದ್ದು ಯಾವುದೇ ಬ್ಯಾಂಕಿನಲ್ಲಿ ನಿಮ್ಮ ಒಟ್ಟು ಠೇವಣಿ ₹ 5 ಲಕ್ಷ ಮೀರದಂತೆ ನೋಡಿಕೊಂಡರೆ ನಿಮ್ಮ ಹಣ ಹೆಚ್ಚು ಸುರಕ್ಷಿತ.

2. ಸುಗಮ ಯುಪಿಐ ವಹಿವಾಟು: ಇದು ಯುಪಿಐ ಯುಗ. ಬಹುತೇಕ ಪಾವತಿಗಳನ್ನು ನಾವು ಗೂಗಲ್ ಪೇ, ಫೋನ್‌ಪೆ, ಪೇಟಿಎಂ ಮತ್ತಿತರ ಆಯಪ್‌ಗಳ ಮೂಲಕ ಮಾಡುತ್ತೇವೆ. ಹೀಗಿರುವಾಗ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಹೆಚ್ಚು ಯುಪಿಐ ಪಾವತಿ ಆಯ್ಕೆಗಳು ಇರುತ್ತವೆ. ಆನ್‌ಲೈನ್ ಪಾವತಿ ಮಾಡುವಾಗ ಒಂದು ಬ್ಯಾಂಕಿನಲ್ಲಿ ತಾಂತ್ರಿಕ ಸಮಸ್ಯೆ ಇದ್ದರೆ ಮತ್ತೊಂದು ಬ್ಯಾಂಕ್ ಮೂಲಕ ಯುಪಿಐ ಪಾವತಿ ಮಾಡಬಹುದು. ಹೆಚ್ಚು ಬ್ಯಾಂಕ್ ಖಾತೆಗಳಿದ್ದಾಗ ಎಲ್ಲಾ ಖಾತೆಗಳಲ್ಲೂ ಸ್ವಲ್ಪ ಸ್ವಲ್ಪ ಹಣ ಇಟ್ಟು ದೊಡ್ಡ ಮೊತ್ತದ ಸಂಭಾವ್ಯ ಆನ್‌ಲೈನ್ ವಂಚನೆ ತಡೆಯಬಹುದು.

3. ಹೆಚ್ಚು ಅನುಕೂಲ ಪಡೆಯುವ ಅವಕಾಶ: ಹೆಚ್ಚು ಬ್ಯಾಂಕ್ ಖಾತೆಗಳಿದ್ದು ವಿವಿಧ ರೀತಿಯ ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದಾಗ ಅವುಗಳಿಂದ ಸಿಗುವ ರಿಯಾಯಿತಿಗಳ ಅನುಕೂಲ ಪಡೆಯಬಹುದು. ಕೆಲ ಡೆಬಿಟ್ ಕಾರ್ಡ್‌ಗಳು ಪೆಟ್ರೋಲ್ ಖರೀದಿಗೆ ರಿವಾರ್ಡ್‌ ನೀಡುತ್ತವೆ ಮತ್ತೆ ಕೆಲವು ಕಾರ್ಡ್‌ಗಳು ಆನ್‌ಲೈನ್ ಶಾಪಿಂಗ್, ಟಿಕೆಟ್ ಕಾಯ್ದಿರಿಸುವಿಕೆಗೆ ಆಕರ್ಷಕ ಕೊಡುಗೆಗಳನ್ನು ನೀಡುತ್ತವೆ. ಹೆಚ್ಚು ಖಾತೆಗಳೊಂದಿಗೆ ಹೆಚ್ಚು ಕಾರ್ಡ್‌ಗಳಿದ್ದಾಗ ಮಾತ್ರ ಇದು ಸಾಧ್ಯ.

4. ಒಂದೇ ಬ್ಯಾಂಕ್ ಮೇಲೆ ಅವಲಂಬಿತರಾಗಬೇಕಿಲ್ಲ: ಬ್ಯಾಂಕುಗಳು ಈಗಿನ ಸ್ಥಿತಿಯಲ್ಲಿ ಹೆಚ್ಚು ತಂತ್ರಜ್ಞಾನ ಕೇಂದ್ರಿತವಾಗಿವೆ. ತಂತ್ರಜ್ಞಾನದಿಂದ ಎಷ್ಟು ಅನುಕೂಲವಿದೆಯೋ ತಂತ್ರಜ್ಞಾನಕ್ಕೆ ಅಷ್ಟೇ ಮಿತಿಯೂ ಇದೆ. ಒಮ್ಮೊಮ್ಮೆ ಬ್ಯಾಂಕಿನ ಸರ್ವರ್ ಡೌನ್ ಆದರೆ ಅದು ನಿಮ್ಮ ಬ್ಯಾಂಕಿಂಗ್ ವ್ಯವಹಾರದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹೆಚ್ಚು ಖಾತೆಗಳಿದ್ದರೆ ಒಂದಲ್ಲ ಒಂದು ಬ್ಯಾಂಕ್ ಖಾತೆ ಮೂಲಕ ತುರ್ತು ವಹಿವಾಟು ಸಾಧ್ಯವಾಗುತ್ತದೆ.

ಹೆಚ್ಚು ಖಾತೆಗಳಿದ್ದರೆ ಅನನುಕೂಲವೇನು?

1. ಕನಿಷ್ಠ ಮೊತ್ತ: ಹಲವು ಬ್ಯಾಂಕ್ ಖಾತೆಗಳಿದ್ದಾಗ ಎಲ್ಲದರಲ್ಲಿಯೂ ಕನಿಷ್ಠ ಮೊತ್ತ ಇರಿಸಬೇಕಾಗುತ್ತದೆ. ಕನಿಷ್ಠ ಮೊತ್ತ ಕಾಯ್ದುಕೊಳ್ಳದಿದ್ದರೆ ಬ್ಯಾಂಕಿನವರು ದಂಡ ವಿಧಿಸುತ್ತಾರೆ. ಕೆಲವು ಬ್ಯಾಂಕುಗಳಲ್ಲಿ ಕನಿಷ್ಠ ಮೊತ್ತ ₹ 5 ಸಾವಿರ ಇದ್ದರೆ, ಇನ್ನು ಕೆಲವು ಬ್ಯಾಂಕ್‌ಗಳಲ್ಲಿ ₹ 10 ಸಾವಿರ ಇರುತ್ತದೆ. ಹೆಚ್ಚು ಬ್ಯಾಂಕ್‌ ಖಾತೆಗಳಿದ್ದರೆ ಕನಿಷ್ಠ ಮೊತ್ತ ಎಂದು ಹೆಚ್ಚು ಹಣವನ್ನು ತೆಗೆದಿರಿಸಬೇಕಾಗುತ್ತದೆ. ಒಂದೇ ಬ್ಯಾಂಕ್ ಖಾತೆ ಇದ್ದರೆ ಕನಿಷ್ಠ ಮೊತ್ತದ ನಿರ್ವಹಣೆಗೆ ತೊಡಗಿಸಬೇಕಾದ ಹಣ ಕಡಿಮೆ ಇರುತ್ತದೆ.

2. ನಿರ್ವಹಣೆ ಸವಾಲು: ಆರ್ಥಿಕ ಶಿಸ್ತು ಹೊಂದಿಲ್ಲದಿದ್ದರೆ ಹಲವು ಬ್ಯಾಂಕ್ ಖಾತೆಗಳನ್ನು ನಿರ್ವಹಣೆ ಮಾಡುವುದು ಕಷ್ಟ. ಎಲ್ಲಾ ಬ್ಯಾಂಕುಗಳ ಚೆಕ್ ಪುಸ್ತಕ, ಪಾಸ್‌ವರ್ಡ್, ಡೆಬಿಟ್ ಕಾರ್ಡ್‌ಗಳನ್ನು ಸೂಕ್ತ ರೀತಿಯಲ್ಲಿ ವಿಂಗಡಣೆ ಮಾಡಿ ಇಟ್ಟುಕೊಳ್ಳದಿದ್ದರೆ ಸವಾಲು ಎದುರಾಗುತ್ತದೆ. ಇನ್ನು ಆದಾಯ ತೆರಿಗೆ ವಿವರ ಸಲ್ಲಿಸುವಾಗ ಎಲ್ಲಾ ಬ್ಯಾಂಕ್‌ಗಳಲ್ಲಿನ ವಹಿವಾಟುಗಳನ್ನು ಒಗ್ಗೂಡಿಸಿ ಲೆಕ್ಕಾಚಾರ ಮಾಡುವುದು ಸಹ ಕಷ್ಟ. ಒಂದೇ ಬ್ಯಾಂಕ್ ಖಾತೆ ಇದ್ದರೆ ಈ ಸವಾಲು ಇರದು.

3. ಖಾತೆ ನಿಷ್ಕ್ರಿಯವಾಗುವ ಸಾಧ್ಯತೆ: ಹಲವು ಬ್ಯಾಂಕ್ ಖಾತೆಗಳಿದ್ದು ಅವನ್ನು ಸಕ್ರಿಯವಾಗಿ ಬಳಕೆ ಮಾಡದಿದ್ದರೆ ಆ ಖಾತೆಗಳು ನಿಷ್ಕ್ರಿಯ ಖಾತೆಗಳಾಗುತ್ತವೆ. ಆರ್‌ಬಿಐ ನಿಯಮದ ಪ್ರಕಾರ ಒಂದು ಖಾತೆ ಎರಡು ವರ್ಷಗಳಿಗಿಂತ ಹೆಚ್ಚು ಅವಧಿಗೆ ಬಳಕೆಯಲ್ಲಿ ಇರದಿದ್ದರೆ ಅಂಥವುಗಳನ್ನು ಬ್ಯಾಂಕುಗಳು 'ನಿಷ್ಕ್ರಿಯ' ಎಂದು ಪರಿಗಣಿಸಬಹುದು. ಹೀಗಾದಾಗ ಬ್ಯಾಂಕಿನ ಸೇವೆಗಳು ನಿಮಗೆ ಸಿಗುವುದಿಲ್ಲ. ಜೊತೆಗೆ ದಂಡ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಹೆಚ್ಚು ಬ್ಯಾಂಕ್ ಖಾತೆಗಳಿದ್ದಾಗ ಅಷ್ಟೂ ಖಾತೆಗಳ ಡೆಬಿಟ್ ಕಾರ್ಡ್‌ಗಳಿಗೆ ಪ್ರತ್ಯೇಕವಾಗಿ ವಾರ್ಷಿಕ ಶುಲ್ಕ ಕಟ್ಟಬೇಕಾಗಿ ಬರುತ್ತದೆ.

ನೆನಪಿಡಿ: ಮೇಲಿನ ಮಾಹಿತಿ ಗಮನಿಸಿದಾಗ ವ್ಯಕ್ತಿಯೊಬ್ಬ ಇಂತಿಷ್ಟೇ ಬ್ಯಾಂಕ್ ಖಾತೆ ಹೊಂದಿರಬೇಕು ಎಂಬುದಕ್ಕೆ ಯಾವುದೇ ಮಾನದಂಡವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಎಷ್ಟು ಬ್ಯಾಂಕ್ ಖಾತೆಗಳಿರಬೇಕು ಎನ್ನುವುದು ವ್ಯಕ್ತಿಗತ ಆರ್ಥಿಕ ಅಗತ್ಯಗಳನ್ನು ಅವಲಂಬಿಸಿದೆ. ಅವರವರ ಅನುಕೂಲಕ್ಕೆ ತಕ್ಕಂತೆ ಬ್ಯಾಂಕ್ ಖಾತೆಗಳು ಎಷ್ಟಿರಬೇಕು ಎನ್ನುವುದನ್ನು ತೀರ್ಮಾನಿಸಬೇಕಾಗುತ್ತದೆ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries