ತಿರುವನಂತಪುರಂ: ಕೇರಳದ ಬಾಲುಶ್ಶೇರಿಯಲ್ಲಿರುವ ತಮ್ಮ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನಲ್ಲಿ ಅತಿಕ್ರಮಣ ಮತ್ತು ಇತರ ಕೆಲವು ಸಮಸ್ಯೆಗಳು ಎದುರಾಗಿವೆ, ಅಲ್ಲಿರುವ ಹುಡುಗಿಯರ ಸುರಕ್ಷತೆಯ ಬಗ್ಗೆ ಕಳವಳವಿದೆ ಎಂದು ಹಿರಿಯ ಅಥ್ಲೀಟ್ ಹಾಗೂ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷೆ ಪಿ ಟಿ ಉಷಾ ಹೇಳಿದ್ದಾರೆ.
ಈ ಕುರಿತು ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಷಾ ತಾವು ಕಳೆದ ವರ್ಷ ರಾಜ್ಯಸಭಾ ಸದಸ್ಯೆಯಾಗಿ ನಾಮನಿರ್ದೇಶನಗೊಂಡ ನಂತರ ಈ ಸಮಸ್ಯೆ ಅಧಿಕವಾಗಿದೆ ಎಂದಿದ್ದಾರೆ.
ತಮ್ಮ ಸಂಸ್ಥೆಯಲ್ಲಿರುವ ಮಹಿಳಾ ಅಥ್ಲೀಟುಗಳ ಸುರಕ್ಷತೆಯ ಬಗ್ಗೆ ಕಳವಳವಿದೆ. ಕಟ್ಟಡದ ಸುತ್ತ ಆವರಣ ಗೋಡೆ ನಿರ್ಮಿಸಲುದ್ದೇಶಿಸಲಾಗಿದ್ದರೂ ಆರ್ಥಿಕ ಸಮಸ್ಯೆಯಿಂದ ಆಗಿಲ್ಲ ಎಂದರು.
ಇತ್ತೀಚೆಗೆ ಕೆಲ ಜನರು ಅಕಾಡೆಮಿಗೆ ನುಗ್ಗಿ ನಿರ್ಮಾಣ ಕೆಲಸ ಆರಂಭಿಸಿದ್ದರು ಹಾಗೂ ಆಡಳಿತ ಪ್ರಶ್ನಿಸಿದಾಗ ಅನುಚಿತವಾಗಿ ವರ್ತಿಸಿದ್ದರು. ಪೊಲೀಸ್ ದೂರು ನೀಡಿದ ನಂತರ ಆ ಜನರು ಹೊರ ಹೋದರು ಎಂದು ಉಷಾ ಹೇಳಿದರು.
ಡ್ರಗ್ಸ್ ವ್ಯಸನಿಗಳು ಮತ್ತು ಜೋಡಿಗಳು ರಾತ್ರಿ ಹೊತ್ತು ಅಕಾಡೆಮಿ ಆವರಣದಲ್ಲಿ ಅಲೆದಾಡುತ್ತಾರೆ, ಕೆಲವೊಮ್ಮೆ ಈ 30 ಎಕರೆ ಸಂಕೀರ್ಣದಲ್ಲಿ ತ್ಯಾಜ್ಯ ಕೂಡ ಸುರಿಯಲಾಗುತ್ತದೆ ಎಂದು ಅವರು ದೂರಿದರು.
ನಮ್ಮ ಹುಡುಗಿಯರ ಸುರಕ್ಷತೆ ಮುಖ್ಯ, ಕೇರಳ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಗದ್ಗದಿತರಾಗಿ ಮಾತನಾಡಿ ಉಷಾ ಹೇಳಿದರು.





