HEALTH TIPS

ಕೃತಿಚೌರ್ಯ ಆರೋಪ: 'ಕಾಂತಾರ' ತಂಡಕ್ಕೆ ನಿರಾಳತೆ ನೀಡಿದ ಸುಪ್ರೀಂ ಕೋರ್ಟ್‌ ಆದೇಶ

 

              ನವದೆಹಲಿ: ಕೃತಿಚೌರ್ಯ ಪ್ರಕರಣದ ಅಂತಿಮ ಆದೇಶದ ಬರುವ ವರೆಗೆ 'ಕಾಂತಾರ' ಚಿತ್ರವನ್ನು 'ವರಾಹರೂಪಂ' ಗೀತೆಯೊಂದಿಗೆ ಪ್ರದರ್ಶಿಸಬಾರದು ಎಂದು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ವಿಧಿಸಿದ್ದ ಷರತ್ತಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

                ಸಿನಿಮಾ ನಿರ್ಮಾಪಕ ವಿಜಯ್‌ ಕಿರಗಂದೂರು ಮತ್ತು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲು ಕೇರಳ ಹೈಕೋರ್ಟ್‌ ಫೆಬ್ರುವರಿ 8ರಂದು ಷರತ್ತುಗಳನ್ನು ವಿಧಿಸಿತ್ತು. ಇದರ ವಿರುದ್ಧ ಕಾಂತಾರ ತಂಡ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

                 ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ. ಎಸ್. ನರಸಿಂಹ ಮತ್ತು ಜೆ ಬಿ ಪಾರ್ದಿವಾಲಾ ಅವರ ಪೀಠವು, ವರಾಹರೂಪಂ ಹಾಡಿನ ಹೊರತಾಗಿ ಚಿತ್ರ ಪ್ರದರ್ಶಿಸಬೇಕೆಂಬ ಕೇರಳ ಹೈಕೋರ್ಟ್‌ನ ಷರತ್ತಿಗೆ ತಡೆ ನೀಡಿತು. ಜತೆಗೇ ಕೇರಳ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಎರಡು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

                 ಮತ್ತೊಂದೆಡೆ, ಹೈಕೋರ್ಟ್‌ನ ಷರತ್ತೊಂದನ್ನು ಮಾರ್ಪಡಿಸಿದ ಪೀಠ, 'ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ವಿಚಾರಣೆಗೆ ಹಾಜರಾಗಬೇಕು. ಅವರನ್ನೇನಾದರೂ ಬಂಧಿಸಿದರೆ ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು' ಎಂದು ಹೇಳಿದೆ.

             ವಿಜಯ್‌ ಕಿರಗಂದೂರು ಮತ್ತು ರಿಷಬ್‌ ಶೆಟ್ಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ರಂಜಿತ್ ಕುಮಾರ್ ಅವರ ಅಹವಾಲುಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಮಧ್ಯಂತರ ಆದೇಶವನ್ನು ನೀಡಿದೆ.

               ಕೃತಿಚೌರ್ಯ ಆರೋಪದಡಿ ಕೋಯಿಕ್ಕೋಡ್ ಪೊಲೀಸ್ ಠಾಣೆಯಲ್ಲಿ 'ಕಾಂತಾರ' ವಿರುದ್ಧ ಪ್ರಕರಣ ದಾಖಲಾಗಿದೆ. ಮಲಯಾಳಂ ಮ್ಯೂಸಿಕ್ ಚಾನೆಲ್ ಕಪ್ಪಾ ಟಿವಿಯಲ್ಲಿ ಪ್ರಸಾರವಾದ "ನವರಸಂ" ಹಾಡನ್ನು ನಕಲು ಮಾಡಿ 'ವರಾಹರೂಪಂ' ಹಾಡನ್ನು ರಚಿಸಲಾಗಿದೆ ಎಂಬುದು ಆರೋಪ.

               ನಿರ್ಮಾಪಕ ವಿಜಯ್‌ ಕಿರಗಂದೂರು ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಐದು ಷರತ್ತುಗಳನ್ನು ವಿಧಿಸಿದ್ದ ಹೈಕೋರ್ಟ್ ಫೆ. 8ರಂದು ಜಾಮೀನು ಮಂಜೂರು ಮಾಡಿತ್ತಾದರೂ, ಫೆಬ್ರುವರ 12 ಮತ್ತು 13ರಂದು ವಿಚಾರಣೆಗಾಗಿ ತನಿಖಾಧಿಕಾರಿಯ ಎದುರು ಶರಣಾಗುವಂತೆ ಹೇಳಿತ್ತು.

                 'ತನಿಖಾಧಿಕಾರಿಯು ನಿರ್ಮಾಪಕ, ನಿರ್ದೇಶಕರನ್ನು ವಿಚಾರಣೆಗೆ ಒಳಪಡಿಸಬಹುದು ಮತ್ತು ನಿರ್ದಿಷ್ಟಪಡಿಸಿದ ಸಮಯದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು ಬಂಧಿಸಿದರೆ, ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ನ್ಯಾಯಾಲಯವು ತಲಾ ₹50 ಸಾವಿರದ ಬಾಂಡ್‌ ಮತ್ತು ಶ್ಯೂರಿಟಿ ಆಧಾರದ ಮೇಲೆ ಜಾಮೀನು ನೀಡಬಹುದು' ಎಂದು ಕೇರಳ ಹೈಕೋರ್ಟ್ ಹೇಳಿತ್ತು.

           ಆರೋಪಿಗಳು ಸಾಕ್ಷಿಗಳನ್ನು ಬೆದರಿಸಬಾರದು ಅಥವಾ ಸಾಕ್ಷ್ಯವನ್ನು ಹಾಳು ಮಾಡಬಾರದು. ಅವರು ತನಿಖೆಗೆ ಸಹಕರಿಸಬೇಕು ಮತ್ತು ವಿಚಾರಣೆಗೆ ಲಭ್ಯವಿರಬೇಕು. ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಆರೋಪಿಗಳು/ಅರ್ಜಿದಾರರು ಭಾರತವನ್ನು ತೊರೆಯಬಾರದು ಎಂದೂ ಕೇರಳ ಹೈಕೋರ್ಟ್‌ ಹೇಳಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries