ನವದೆಹಲಿ: ಜಾಗತಿಕ ಸವಾಲುಗಳನ್ನು ಎದುರಿಸಲು ಜಿ 20 ರಾಷ್ಟ್ರಗಳು ಒಮ್ಮತಕ್ಕೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ.
ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಜಿ 20 ರಾಷ್ಟ್ರಗಳ ನಡುವೆ ಮೂಡಿರುವ ಒಡಕಿನ ಮಧ್ಯೆ ಮೋದಿ ಅವರಿಂದ ಈ ಹೇಳಿಕೆ ಬಂದಿತು.
ಜಿ 20 ವಿದೇಶಾಂಗ ಸಚಿವರ ಸಭೆ ಉದ್ದೇಶಿಸಿ ವಿಡಿಯೊ ಸಂದೇಶ ನೀಡಿರುವ ಅವರು, ಒಟ್ಟಾರೆ ಸಹಕಾರದ ಮೇಲೆ ಪರಿಣಾಮ ಬೀರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮೇಲಿನ ಭಿನ್ನಾಭಿಪ್ರಾಯಗಳಿಗೆ ಜಿ 20 ಅವಕಾಶ ನೀಡಬಾರದು' ಎಂದರು.
'ಅಭಿವೃದ್ಧಿ, ಆರ್ಥಿಕ ಸ್ಥಿರತೆ, ವಿಪತ್ತು ನಿರ್ವಹಣೆ, ಆಹಾರ ಮತ್ತು ಇಂಧನ ಭದ್ರತೆ ಸಾಧಿಸಲು ಹಾಗೂ ಭಯೋತ್ಪಾದನೆ, ದೇಶೀಯ ಅಪರಾಧ, ಭ್ರಷ್ಟಾಚಾರ ಹತ್ತಿಕ್ಕಲು ಜಗತ್ತು ಜಿ 20 ಕಡೆಗೆ ನೋಡುತ್ತಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಒಮ್ಮತ ಮೂಡಿಸುವ ಮತ್ತು ದೃಢ ಫಲಿತಾಂಶ ನೀಡುವ ಸಾಮರ್ಥ್ಯ ಜಿ 20 ಹೊಂದಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಬಹುಪಕ್ಷೀಯತೆ ಇಂದು ಬಿಕ್ಕಟ್ಟಿನಲ್ಲಿದೆ. ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ, ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಯುದ್ಧದ ವಿಷಯಗಳಲ್ಲಿ ಜಾಗತಿಕ ಆಡಳಿತವು ವಿಫಲವಾಗಿರುವುದು ಸ್ಪಷ್ಟ. ಈ ವೈಫಲ್ಯದ ದುರಂತ ಪರಿಣಾಮಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವುದನ್ನು ನಾವು ಒಪ್ಪಿಕೊಳ್ಳಬೇಕು. ವರ್ಷಗಳ ಪ್ರಗತಿಯ ನಂತರ, ನಾವು ಇಂದು ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಹಿಮ್ಮುಖ ಚಲನೆಯ ಅಪಾಯದಲ್ಲಿದ್ದೇವೆ' ಎಂದು ಮೋದಿ ಹೇಳಿದ್ದಾರೆ.
ಉಕ್ರೇನ್ ಸಂಘರ್ಷ ಅಥವಾ ಇತರ ಯಾವುದೇ ವಿವಾದಾತ್ಮಕ ವಿಷಯಗಳನ್ನು ಉಲ್ಲೇಖಿಸದೇ, 'ಪರಿಹರಿಸಬಹುದಾದ ಬಿಕ್ಕಟ್ಟುಗಳು ಎಷ್ಟೇ ಕಠಿಣವಿದ್ದರೂ ಅವುಗಳನ್ನು ಬಗೆಹರಿಸುವ ಅವಕಾಶವನ್ನು ಜಿ 20 ಕೈಚೆಲ್ಲಬಾರದು. ವಿಭಜನೆ ಬಿಟ್ಟು, ಒಗ್ಗಟ್ಟಿನ ಕಡೆಗೆ ಗಮನ ಕೇಂದ್ರೀಕರಿಸಬೇಕಿದೆ' ಎಂದು ಮೋದಿ ಹೇಳಿದ್ದಾರೆ.
ಗಾಂಧಿ ಮತ್ತು ಬುದ್ಧನನ್ನು ಸ್ಮರಿಸಿದ ಮೋದಿ, 'ಭಾರತದ ನಾಗರಿಕತೆಯ ಮೌಲ್ಯಗಳಿಂದ ಪ್ರೇರಣೆ ಪಡೆದುಕೊಳ್ಳಿ. ನಿಮ್ಮೆಲ್ಲರ ಸಾಮೂಹಿಕ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಸಮತೋಲನದ ಅಭಿವೃದ್ಧಿ ಸಾಧಿಸಬಹುದು, ಜಾಗತಿಕ ಸವಾಲುಗಳನ್ನು ಮೆಟ್ಟಿನಿಲ್ಲಬಹುದು' ಎಂದು ಅವರು ಹೇಳಿದ್ದಾರೆ.





