ತಿರುವನಂತಪುರಂ: ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವ ಐತಿಹಾಸಿಕ ಸಾಧನೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ. 2022-23ನೇ ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಮುಂದಿನ ವರ್ಷಕ್ಕೆ ಸಮವಸ್ತ್ರ ವಿತರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಇದೇ ತಿಂಗಳ 25ರಂದು (ಶನಿವಾರ, ಮಾರ್ಚ್ 25) ಸಮವಸ್ತ್ರ ವಿತರಣೆಯ ರಾಜ್ಯಮಟ್ಟದ ಉದ್ಘಾಟನೆಗೆ ಸಿದ್ಧತೆಗಳನ್ನು ಕೈಗಾರಿಕೆ ಸಚಿವ ಪಿ. ರಾಜೀವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವಲೋಕನ ನಡೆಸಲಾಯಿತು.
ಮಾರ್ಚ್ 25 ರಂದು ಬೆಳಿಗ್ಗೆ 11 ಗಂಟೆಗೆ ಏಲೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಚಾಲನೆ ನೀಡಲಾಗುವುದು. ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕೈಮಗ್ಗ ಸಮವಸ್ತ್ರ ವಿತರಿಸಲಾಗುವುದು. ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ, ಕೈಗಾರಿಕಾ ಸಚಿವ ಪಿ. ರಾಜೀವ್ ಮತ್ತಿತರರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಸಮೀಪದ ಎಲ್ಲ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡು ಸಾರ್ವಜನಿಕ ಹಬ್ಬವನ್ನಾಗಿ ಮಾಡಬೇಕು ಎಂದಿರುವರು.
ಕಾರ್ಯಕ್ರಮದ ಆಯೋಜನಾ ಸಮಿತಿಯನ್ನು ರಚಿಸಲು ಸೋಮವಾರ (ಮಾ.20) ಮಧ್ಯಾಹ್ನ 3 ಗಂಟೆಗೆ ಎಲ್ಲೂರು ನಗರಸಭೆ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಲಿದೆ. ಕಳಮಶ್ಚೇರಿ ಕ್ಷೇತ್ರದಲ್ಲಿ ಆಯ್ಕೆಯಾದ 60 ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಕ್ರಮಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಬಿಪಿಸಿಎಲ್ ನೆರವಿನಿಂದ ರೂ.95,61,502 ವೆಚ್ಚ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.






