ಪೆರ್ಲ: ಸ್ವರ್ಗ ಶಾಲೆಯಲ್ಲಿ ಸಿರಿಧಾನ್ಯಗಳ ಆಹಾರ ಮೇಳ : ಸಿರಿಧಾನ್ಯ ವರ್ಷಾಚರಣೆ ಅಂಗವಾಗಿ ಸ್ವರ್ಗ ಸ್ವಾಮೀ ವಿವೇಕಾನಂದ ಎಯುಪಿ ಶಾಲೆಯಲ್ಲಿ ಸಿರಿಧಾನ್ಯಗಳ ಆಹಾರ ಮೇಳ ಕಾರ್ಯಕ್ರಮ ಆಯೋಜಿಸಲಾಯಿತು.
ಆಹಾರ ಭದ್ರತೆ ಹಾಗೂ ಆರೋಗ್ಯ ಪೋಷಣೆಗೆ ‘ರಾಗಿ’ಯ ಕೊಡುಗೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಸುಸ್ಥಿರ ರಾಗಿ ಉತ್ಪಾದನೆ ಮತ್ತು ಗುಣಮಟ್ಟವನ್ನು ಸುಧಾರಿಸಲು, ರಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ವಿಸ್ತರಣಾ ಸೇವೆಗಳಲ್ಲಿ ವರ್ಧಿತ ಹೂಡಿಕೆಯ ಮೇಲೆ ಕೇಂದ್ರೀಕರಿಸಿ 2023ನ್ನು ಅಂತರರಾಷ್ಟ್ರೀಯ "ರಾಗಿ" ವರ್ಷವನ್ನಾಗಿ ಆಚರಿಸುವ ಭಾರತದ ಪ್ರಸ್ತಾಪವನ್ನು ಆಹಾರ ಮತ್ತು ಕೃಷಿ ಸಂಸ್ಥೆ 2018ರಲ್ಲಿ ಅನುಮೋದಿಸಿದ್ದು 70 ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇದನ್ನು ಅಂಗೀಕರಿಸಿ 2023 ವರ್ಷವನ್ನು ಅಂತರರಾಷ್ಟ್ರೀಯ "ರಾಗಿ" ವರ್ಷವನ್ನಾಗಿ ಘೋಷಿಸಿದೆ.
ಈ ಶೈಕ್ಷಣಿಕ ವರ್ಷವು ಸಿರಿಧಾನ್ಯಗಳ ವರ್ಷವೆಂದು ಪರಿಗಣಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ಪೋಷಕ ಆಹಾರದ ಕೊರತೆ ಮಕ್ಕಳಲ್ಲಿ ಹೆಚ್ಚುತ್ತಿರುವುದು ಗಮನಾರ್ಹ ವಿಷಯವಾಗಿದೆ.ಈ ಬಗ್ಗೆ ಅರಿವು ಮೂಡಿಸಲು ಶಾಲೆಯ ಎಲ್ಲ ತರಗತಿಯ ಮಕ್ಕಳು ಪೋಷಕರ ನೆರವಿದೊಂದಿಗೆ ತಯಾರಿಸಿ ತಂದ ಸಿರಿಧಾನ್ಯಗಳ ಖಾದ್ಯವನ್ನು ಪ್ರದರ್ಶಿಸಿದರು.
ಮಕ್ಕಳು ತಾವು ತಂದ ಖಾದ್ಯವನ್ನು ತಯಾರಿಸುವ ವಿಧಾನವನ್ನು ತಿಳಿಸಿದರು. ರಾಗಿ, ಜೋಳ, ಗೋಧಿ, ಸಾಮೆ, ನವಣೆ, ಸಜ್ಜೆ ಮೊದಲಾದ ಧಾನ್ಯಗಳಿಂದ ತಯಾರಿಸಿದ ವಿವಿಧ ಬಗೆಯ ಖಾದ್ಯಗಳು ಆಹಾರ ಮೇಳದಲ್ಲಿ ಪ್ರದರ್ಶನಗೊಂಡಿತು. ಇದರಿಂದ ಮಕ್ಕಳಿಗೆ ವಿವಿಧ ಆಹಾರ ತಿನಿಸುಗಳ ಪರಿಚಯ ಮಾಡಿಕೊಳ್ಳಲು ಸಾಧ್ಯವಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಧಾನ್ಯಗಳನ್ನು ಪರಿಚಯಿಸಲಾಯಿತು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಪೋಷಕ ಆಹಾರದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.




.jpg)
.jpg)
