ಕಾಸರಗೋಡು: ಶಾಲಾ ಮಟ್ಟ ಮತ್ತು ಉನ್ನತ ಶಿಕ್ಷಣ ವಲಯದಲ್ಲಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಕೇಂದ್ರಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿರುವುದಾಗಿ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಸಭಾಂಗಣದಲ್ಲಿ ಶನಿವಾರ ನಡೆದ ಆರನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಪರಿವರ್ತನೆಗೆ ನಾಂದಿಯಾಗಲಿದೆ. ಈ ನೀತಿಯು ಹೊಸ ಶತಮಾನಕ್ಕೆ ಭಾರತದ ಯುವಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ದೇಶವು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಸಮಗ್ರ ಶಿಕ್ಷಣವನ್ನು ಕಲ್ಪಿಸುತ್ತದೆ. ಸಮಾನ, ಅಂತರ್ಗತ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶಿಸಬಹುದಾಗಿದೆ ಎಂದು ತಿಳಿಸಿದರು.
ಸಮಗ್ರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮತ್ತು ಹಸಿರು ಕ್ಯಾಂಪಸ್ ಉಪಕ್ರಮವನ್ನು ಅಳವಡಿಸಿಕೊಳ್ಳಲು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕೈಗೊಂಡಿರುವ ಕ್ರಮಗಳಿಗಾಗಿ ಸಚಿವ ಸುಭಾಷ್ ಸರ್ಕಾರ್ ಅಧಿಖಾರಿಗಳನ್ನು ಅಭಿನಂದಿಸಿದರು.
ವಿದೇಶಾಂಗ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಶ್ವವೇ ಭಾರತವನ್ನು ಭರವಸೆಯ ಕಂಗಳಿಂದ ನೋಡುತ್ತಿದ್ದು, ಶ್ರಮಶೀಲ ಯುವ ಪಡೆ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ. ಮುಂದಿನ 25 ವರ್ಷಗಳು ಭಾರತದ ಪಾಲಿಗೆ ನಿರ್ಣಾಯಕವಾಗಿದ್ದು, ಮುಂದಿನ ಪೀಳಿಗೆಯ ಸಮೃದ್ಧಿ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಮಾರ್ಗವನ್ನು ಹೊಂದಿಸುವಲ್ಲಿ ಯುವ ಸಮೂಹ ಪ್ರಮುಖ ಪಾತ್ರ ವಹಿಸಲಿದೆ. ನಿಮ್ಮ ಕನಸು ಮತ್ತು ಪ್ರಯತ್ನ ಭಾರತದ ದಿಕ್ಕನ್ನು ನಿರ್ಧರಿಸಲಿದ್ದು, ಮಹತ್ವಾಕಾಂಕ್ಷೆ ಮತ್ತು ಬಯಕೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರಫೆಸರ್ ಎಚ್. ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದರು. 2021-2022 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ 1947 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 82 ಮಂದಿಗೆ ಪದವಿ, 1732 ಮಂದಿಗೆ ಸ್ನಾತಕೋತ್ತರ ಪದವಿ, 57 ಮಂದಿಗೆ ಡಾಕ್ಟರೇಟ್ ಪದವಿ, 54 ಮಂದಿಗೆ ಪಿಜಿ ಡಿಪೆÇ್ಲಮಾ ಹಾಗೂ 22 ಮಂದಿಗೆ ಪ್ರಮಾಣ ಪತ್ರ ನೀಡಲಾಯಿತು.
ಕುಲಸಚಿವ ಡಾ.ಮುರಳೀಧರ ನಂಬಿಯಾರ್, ಪ್ರಭಾರ ಪರೀಕ್ಷಾ ನಿಯಂತ್ರಕ ಪೆÇ್ರ.ಎಂ.ಎನ್. ಮುಸ್ತಫಾ, ಅಕಾಡೆಮಿಕ್ ಡೀನ್ ಅಮೃತ್ ಜಿ. ಕುಮಾರ್, ವಿಶ್ವವಿದ್ಯಾಲಯದ ಕೋರ್ಟ್ ಸದಸ್ಯರು, ಕಾರ್ಯಕಾರಿ ಮಂಡಳಿಯ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು, ಹಣಕಾಸು ಸಮಿತಿಯ ಸದಸ್ಯರು, ಸಮುದಾಯ ಪ್ರತಿನಿಧಿಗಳು, ವಿವಿಧ ಶಾಲೆಗಳ ಡೀನ್‍ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಸಂದರ್ಭ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಮತ್ತು ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುರಳೀಧರನ್ ಅವರು ಪೆರಿಯಾ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಕರಿಗಾಗಿ ನಿರ್ಮಿಸಲಾದ ಕ್ವಾರ್ಟರ್ಸ್ ಮತ್ತು ವಿಶೇಷವಾಗಿ ನಿರ್ಮಿಸಲಾದ ಕ್ಯಾಂಟೀನ್ ಹಾಸ್ಟೆಲ್‍ಗಳನ್ನು ಉದ್ಘಾಟಿಸಿದರು. ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು ವಿದ್ಯಾಭ್ಯಾಸ ವಿಕಾಸ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ "ಜ್ಞಾನೋತ್ಸವಂ 1198" ಬ್ರೋಷರ್ ಅನ್ನು ಡಾ.ಸುಭಾಸ್ ಸರ್ಕಾರ್ ಬಿಡುಗಡೆ ಮಾಡಿದರು.
ಗೌರವ ಡಾಕ್ಟರೇಟ್:
ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪಿ.ಟಿ.ಉಷಾ ಅವರಿಗೆ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗಿದ್ದು, ವಿಶ್ವವಿದ್ಯಾನಿಲಯವು ನೀಡುವ ಮೊದಲ ಗೌರವ ಡಾಕ್ಟರೇಟ್ ಇದಾಗಿದೆ.
ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಕ್ಯಾಂಪಸ್ ಘಟಿಕೋತ್ಸವದಲ್ಲಿ ಕೇಂದ್ರ ಶಿಕ್ಷಣ ಸಚಿವ ಸುಭಾಸ್ ಸರ್ಕಾರ್ ಅಭಿಮತ
0
ಮಾರ್ಚ್ 26, 2023





