ನವದೆಹಲಿ: ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಸ್ತುತದ ಸವಾಲುಗಳನ್ನು ಎದುರಿಸಲು, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ಹೆಚ್ಚು ಗಮನ ಕೇಂದ್ರೀಕರಿಸಿ ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಅವರ ಜತೆ ಮಾತುಕತೆ ನಡೆಸಲಾಯಿತು ಎಂದು ವಿದೇಶಾಂಗ ಸಚಿವ ಎಸ್.
ಜೈಶಂಕರ್ ಗುರುವಾರ ಹೇಳಿದರು.
ಪೂರ್ವ ಲಡಾಖ್‌ನಲ್ಲಿ ಗಡಿ ಸಂಘರ್ಷ ಉದ್ಭವಿಸಿ 34 ತಿಂಗಳಾದ ನಂತರ ಜಿ20 ಸಮಾವೇಶದ ವೇಳೆ ನಡೆದಿರುವ ಪ್ರಮುಖ ದ್ವಿಪಕ್ಷೀಯ ಸಭೆ ಇದಾಗಿದೆ. ಉಭಯ ನಾಯಕರು ಕಳೆದ ಡಿಸೆಂಬರ್‌ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಚೀನಾ ಮತ್ತು ಭಾರತದ ನಡುವೆ ಉಂಟಾಗಿರುವ ಅಸಹಜವಾದ ಸಂಬಂಧಗಳ ಬಗ್ಗೆ ಕೇಂದ್ರಿತವಾಗಿದ್ದ ಮಾತುಕತೆಯಲ್ಲಿ ಜೈಶಂಕರ್, 'ಗಡಿ ಪ್ರದೇಶಗಳಲ್ಲಿ ಶಾಂತಿ ಇಲ್ಲದಿದ್ದರೆ ಚೀನಾದೊಂದಿಗಿನ ಸಂಬಂಧಗಳು ಸಾಮಾನ್ಯವಾಗಲು ಸಾಧ್ಯವಿಲ್ಲವೆಂದು ಭಾರತ ಭಾವಿಸಿದೆ' ಎಂದು ಹೇಳಿದ್ದಾರೆ.
ಮಾತುಕತೆಗೂ ಮೊದಲು ಜೈಶಂಕರ್, 'ಜಿ20 ವಿದೇಶಾಂಗ ಸಚಿವರ ಸಭೆಯ ಜತೆಗೆ ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಅವರೊಂದಿಗೂ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಡೆಸಲಾಗುವುದು. ನಮ್ಮ ಮಾತುಕತೆ ದ್ವಿಪಕ್ಷೀಯ ಸಂಬಂಧಕ್ಕೆ ಎದುರಾಗಿರುವ ಪ್ರಸ್ತುತ ಸವಾಲುಗಳನ್ನು ಎದುರಿಸಲು ಕೇಂದ್ರೀಕರಿಸಿದೆ. ವಿಶೇಷವಾಗಿ ಗಡಿ ಪ್ರದೇಶಗಳಲ್ಲಿನ ಶಾಂತಿ ಮತ್ತು ನೆಮ್ಮದಿಯನ್ನು ಕೇಂದ್ರೀಕರಿಸಿದೆ' ಎಂದು ಟ್ವೀಟ್ ಮಾಡಿದ್ದರು.





