HEALTH TIPS

ಬಿಜೆಪಿಗೆ ಶಾಶ್ವತವಾಗಿ ಅಧಿಕಾರದಲ್ಲಿರುವ ಭ್ರಮೆ: ರಾಹುಲ್‌ ಟೀಕೆ

 

           ಲಂಡನ್‌: 'ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಾಗಿ ಬಿಜೆಪಿ ನಂಬಿದೆ. ಆದರೆ, ಇದು ಸಾಧ್ಯವಿಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಲಿವೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

               ಇಲ್ಲಿನ ಸ್ವತಂತ್ರ ನೀತಿ ನಿರೂಪಣಾ ಸಂಸ್ಥೆಯಾದ 'ಚಥಮ್ ಹೌಸ್' ಚಿಂತಕರ ಚಾವಡಿಯಲ್ಲಿ ಸೋಮವಾರ ಸಂಜೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 'ಭಾರತದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದ್ದು, ಇಸ್ರೇಲ್‌ನ ಪೆಗಾಸಸ್‌ ಕುತಂತ್ರಾಂಶದ ಮೂಲಕ ನನ್ನ ಮೊಬೈಲ್‌ ಫೋನ್‌ ಮೇಲೆ ಆಡಳಿತಾರೂಢ ಬಿಜೆಪಿ ಕಣ್ಗಾವಲಿರಿಸಿದೆ' ಎಂದು ಮತ್ತೊಮ್ಮೆ ಆರೋಪಿಸಿದರು.

                 'ಅಧಿಕಾರದ ದೃಷ್ಟಿಯಲ್ಲಿ, ಸ್ವಾತಂತ್ರ್ಯ ನಂತರದಿಂದ ಈವರೆಗೂ ಕಾಂಗ್ರೆಸ್ ಬಹುಪಾಲು ಸಮಯ ಆಡಳಿತದಲ್ಲಿದೆ. ಬಿಜೆಪಿ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬರುವ ಮೊದಲು ನಾವೂ 10 ವರ್ಷ ಅಧಿಕಾರದಲ್ಲಿದ್ದೆವು. ಬಿಜೆಪಿ ಆಡಳಿತಕ್ಕೆ ಬಂದ ನಂತರ ಶಾಶ್ವತವಾಗಿ ಅಧಿಕಾರದಲ್ಲಿರುವ ನಂಬಿಕೆಯಲ್ಲಿದೆ. ಆದರೆ, ಅದು ನಿಜವಾಗುವುದಿಲ್ಲ' ಎಂದು ರಾಹುಲ್‌ ಹೇಳಿದರು.

                  'ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರೆಸ್ಸೆಸ್‌) ಮೂಲಭೂತವಾದಿ ಮತ್ತು ಫ್ಯಾಸಿಸ್ಟ್ ಸಂಘಟನೆಯ ಗುರಿ ಹೊಂದಿದೆ. ಅದು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ಪ್ರಜಾಸತ್ತಾತ್ಮಕ ಸ್ಪರ್ಧೆಯ ಸ್ವರೂಪವನ್ನೇ ಬದಲಾಯಿಸಿದೆ' ಎಂದು ಆರೋಪಿಸಿದರು.

                 'ನೀವು ಇದನ್ನು (ಆರೆಸ್ಸೆಸ್‌) ರಹಸ್ಯ ಸಮಾಜವೆಂದು ಕರೆಯಬಹುದು. ಈ ಸಂಘಟನೆಯನ್ನು 'ಮುಸ್ಲಿಂ ಬ್ರದರ್ ಹುಡ್‌' ಮಾರ್ಗದಲ್ಲಿ ಕಟ್ಟಲಾಗಿದೆ. ಅಧಿಕಾರಕ್ಕೇರಲು ಪ್ರಜಾಸತ್ತಾತ್ಮಕ ಸ್ಪರ್ಧೆ ಬಳಸಿಕೊಳ್ಳುವುದು ಮತ್ತು ನಂತರ ಪ್ರಜಾಸತ್ತಾತ್ಮಕ ಸ್ಪರ್ಧೆಯನ್ನು ಕುಗ್ಗಿಸುವುದು ಅದರ ಆಲೋಚನೆ. ದೇಶದ ಪ್ರಜಾಪ್ರಭುತ್ವವು ಗಂಭೀರ ಸಮಸ್ಯೆಯಲ್ಲಿರುವುದನ್ನು ವಿದೇಶಿ ಮಾಧ್ಯಮಗಳು ಎತ್ತಿ ತೋರಿಸುತ್ತಿವೆ' ಎಂದು ರಾಹುಲ್‌, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

                'ದೇಶದ ವಿವಿಧ ಸಾಂವಿಧಾನಿಕ ಸಂಸ್ಥೆಗಳನ್ನು ಹಿಡಿದಿಟ್ಟುಕೊಳ್ಳಲು ಅವರು (ಬಿಜೆಪಿ) ಯಶಸ್ವಿಯಾಗಿರುವುದನ್ನು ನೋಡಿ ಆಘಾತವಾಗಿದೆ. ಪತ್ರಿಕಾರಂಗ, ನ್ಯಾಯಾಂಗ, ಸಂಸತ್ತು, ಚುನಾವಣಾ ಆಯೋಗ - ಹೀಗೆ ಎಲ್ಲ ಸಂಸ್ಥೆಗಳು ಒತ್ತಡ, ಬೆದರಿಕೆಗೆ ಸಿಲುಕಿವೆ. ಅಲ್ಲದೆ, ನಿಯಂತ್ರಿಸಲ್ಪಡುತ್ತಲೂ ಇವೆ' ಎಂದು ಅವರು ಹೇಳಿದರು.

                 ಭಾರತ-ಚೀನಾ ಸಂಬಂಧವನ್ನು ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಹೋಲಿಸಿ, ದೇಶದ ವಿದೇಶಾಂಗ ನೀತಿಯನ್ನು ಟೀಕಿಸಿದ ರಾಹುಲ್‌, 'ಚೀನಾ, ಭಾರತದ 2,000 ಚದರ ಕಿ.ಮೀ ಭೂಪ್ರದೇಶ ಕಬಳಿಸಿದೆ. ಆದರೆ, ನಮ್ಮ ಪ್ರಧಾನಿ ಇದನ್ನು ಅಲ್ಲಗಳೆಯುತ್ತಾರೆ. ಯುರೋಪ್ ಮತ್ತು ಅಮೆರಿಕದ ಸಂಬಂಧ ತೊರೆಯದಿದ್ದರೆ ನಿಮ್ಮ ಪ್ರಾದೇಶಿಕ ಗಡಿ ಸಾರ್ವಭೌಮತೆ ಬದಲಿಸಬೇಕಾಗುತ್ತದೆ ಎಂದು ರಷ್ಯಾ, ಉಕ್ರೇನ್‌ಗೆ ಬೆದರಿಕೆ ಹಾಕಿತು. ಅದರಂತೆ ಆಕ್ರಮಣವನ್ನೂ ಆರಂಭಿಸಿತು. ನನ್ನ ದೃಷ್ಟಿಯಲ್ಲಿ, ರಷ್ಯಾ ಮಾದರಿಯನ್ನೇ ಚೀನಾ ನಮ್ಮ ದೇಶದ ಗಡಿಯಲ್ಲಿ ಅನುಸರಿಸುತ್ತಿದೆ. ಅಮೆರಿಕದ ಜತೆಗೆ ಅಂತರ ಕಾಯ್ದುಕೊಳ್ಳಲು ಭಾರತದ ಮೇಲೆ ಬೆದರಿಕೆ ಹಾಕುತ್ತಿದೆ' ಎಂದರು.

                 ಭಾರತ- ‍ಪಾಕಿಸ್ತಾನ ಸಂಬಂಧ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಎಲ್ಲ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಮುಖ್ಯವೆಂದು ನಂಬಿರುವೆ. ಆದರೆ, ಇದು ಪಾಕಿಸ್ತಾನದವರ ಮೇಲೆ ನಿಂತಿದೆ. ಪಾಕಿಸ್ತಾನಿಯರು ಭಾರತದಲ್ಲಿ ಭಯೋತ್ಪಾದನೆ ಉತ್ತೇಜಿಸುತ್ತಿದ್ದರೆ, ಉಭಯತ್ರರ ಸಂಬಂಧ ಸ್ನೇಹಪರವಾಗುವುದು ತುಂಬಾ ಕಷ್ಟ' ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries