ನವದೆಹಲಿ: ಸಂಸತ್ತಿನಲ್ಲಿ ಸೋಮವಾರದಿಂದ ಬಜೆಟ್ ಅಧಿವೇಶನದ ಎರಡನೇ ಭಾಗವು ಆರಂಭಗೊಳ್ಳಲಿದ್ದು, ಪ್ರತಿಪಕ್ಷಗಳು ಚರ್ಚೆಗೆ ಸಿದ್ಧತೆ ನಡೆಸಿವೆ.
ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ಸರ್ಕಾರದೊಂದಿಗೆ ಮಾತ್ರವಲ್ಲದೇ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರೊಂದಿಗೆ ಮತ್ತೊಂದು ಸುತ್ತಿನ ಮುಖಾಮಖಿಗೆ ಸಿದ್ಧವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸೋಮವಾರ ವಿರೋಧಪಕ್ಷಗಳ ಸಮಾನ ನಾಯಕರು ಸಭೆ ನಡೆಸಲಿದ್ದು, ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಕಳೆದ ಅಧಿವೇಶನದಲ್ಲಿ ಅದಾನಿ ಸಮೂಹ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ವಿಶೇಷಾಧಿಕಾರ ಸಮಿತಿಯ ಮೂಲಕ ಲೋಕಸಭೆಯಿಂದ ಹೊರಹಾಕುವಂತೆ ಬಿಜೆಪಿ ಒತ್ತಾಯಿಸಿದ್ದು, ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗಿದೆ.
ವಿವಿಧ ವಿರೋಧ ಪಕ್ಷಗಳ 12 ಸಂಸದರ ವಿರುದ್ಧ ವಿಶೇಷಾಧಿಕಾರದ ಉಲ್ಲಂಘನೆ, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ವಿರುದ್ಧದ ನೋಟಿಸ್, ಕಾಂಗ್ರೆಸ್‌ನ ರಜನಿ ಪಾಟೀಲ್ ಅವರ ಅಮಾನತು ಸೇರಿದಂತೆ ಇತರ ವಿಷಯಗಳ ಕುರಿತು ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಜೆಟ್ ಅಧಿವೇಶನದ ಎರಡನೇ ಭಾಗವು, ಬಜೆಟ್ ಅಂಗೀಕಾರ ಹಾಗೂ ಆಯ್ದ ಸಚಿವಾಲಯಗಳ ಕಾರ್ಯನಿರ್ವಹಣೆಯ ಚರ್ಚೆಗೆ ಸಾಕ್ಷಿಯಾಗಲಿದೆ. ಪ್ರತಿಪಕ್ಷಗಳು ಬೆಲೆ ಏರಿಕೆ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗದಂತಹ ವಿಷಯಗಳ ಚರ್ಚೆಗೆ ಸಜ್ಜಾಗಿರುವುದರಿಂದ ಸರ್ಕಾರವು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ವಿದೇಶದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು 'ಪ್ರತಿಪಕ್ಷಗಳು ಮಾತನಾಡುವಾಗ ಭಾರತದ ಸಂಸತ್ತಿನಲ್ಲಿ ಮೈಕ್‌ಗಳು ಆಫ್ ಆಗಿರುತ್ತವೆ' ಎಂದು ನೀಡಿದ್ದ ಹೇಳಿಕೆಗೆ, ಶನಿವಾರವಷ್ಟೇ ಪ್ರತಿಕ್ರಿಯಿಸಿರುವ ಸಭಾಪತಿ ಜಗದೀಪ್ ಧನಂಕರ್ ಅವರು, 'ಇದು ಭಾರತದ ಸಂಸತ್ತಿನಲ್ಲಿ ಎಂದಿಗೂ ಸಂಭವಿಸಲು ಸಾಧ್ಯವಿಲ್ಲ' ಎಂದು ಪ್ರತ್ಯುತ್ತರ ನೀಡಿದ್ದರು.