ನವದೆಹಲಿ: 'ಪ್ರತಿಕೂಲ ಹವಾಮಾನದಿಂದಾಗಿ ದೇಶದ ಕೆಲವೆಡೆ ಗೋಧಿ ಬೆಳೆಯ ಇಳುವರಿ ಕುಂಠಿತಗೊಂಡಿದೆ. ಇದರ ಹೊರತಾಗಿಯೂ ಈ ವರ್ಷ ದಾಖಲೆಯ 112.18 ದಶಲಕ್ಷ ಟನ್ ಗೋಧಿ ಉತ್ಪಾದನೆಯಾಗುವ ನಿರೀಕ್ಷೆ ಇದೆ' ಎಂದು ಕೇಂದ್ರ ಆಹಾರ ಇಲಾಖೆಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಗುರುವಾರ ಹೇಳಿದ್ದಾರೆ.
'ಕಳೆದ ವರ್ಷ ಕೆಲ ರಾಜ್ಯಗಳಲ್ಲಿ ಬಿಸಿಗಾಳಿ ಬೀಸಿದ್ದರಿಂದಾಗಿ ಗೋಧಿ ಉತ್ಪಾದನೆಯು 107.74 ದಶಲಕ್ಷ ಟನ್‌ಗೆ ಕುಸಿದಿತ್ತು. ಆದರೆ 2022-23ನೇ (ಜುಲೈ-ಜೂನ್) ಸಾಲಿನಲ್ಲಿ 112.18 ದಶಲಕ್ಷ ಟನ್ ಗೋಧಿ ಉತ್ಪಾದನೆಯಾಗಬಹುದೆಂದು ಸರ್ಕಾರವು ಅಂದಾಜಿಸಿದೆ. ಕಳೆದ ಎರಡು ವಾರಗಳಿಂದ ಪ್ರತಿಕೂಲ ಹವಾಮಾನ ಸೃಷ್ಟಿಯಾಗಿದೆ. ಇದರಿಂದ ಗೋಧಿ ಬೆಳೆಗೂ ಹಾನಿಯಾಗಿದೆ' ಎಂದಿದ್ದಾರೆ.
'ಮಧ್ಯಪ್ರದೇಶದಲ್ಲಿ ಗೋಧಿ ಖರೀದಿಗೆ ಇದ್ದ ಗುಣಮಟ್ಟದ ಮಾನದಂಡವನ್ನು ಸಡಿಲಿಸಲಾಗಿದೆ. ಪಂಜಾಬ್ ಹಾಗೂ ಹರಿಯಾಣದಲ್ಲೂ ಗುಣಮಟ್ಟದ ಮಾನದಂಡ ಸಡಿಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಲಿದೆ' ಎಂದು ಹೇಳಿದ್ದಾರೆ.





