ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 24ರಿಂದ ಎರಡು ದಿನಗಳ ಕೇರಳ ಪ್ರವಾಸ ಕೈಗೊಳ್ಳಲಿದ್ದು, ತಿರುವನಂತಪುರ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿಯವರಿಗೆ ಅದ್ಧೂರಿ ಸ್ವಾಗತ ನೀಡಲು ಸಕಲ ಸಿದ್ಧತೆ ನಡೆಸುತ್ತಿರುವ ಬಿಜೆಪಿ ರಾಜ್ಯ ಘಟಕ, ಈ ಕುರಿತು ಪೋಸ್ಟರ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ.
'ವಿಶ್ವನಾಯಕ' ಕೇರಳಕ್ಕೆ ಬರುತ್ತಿದ್ದು, 24ರಂದು ಕೊಚ್ಚಿಯಲ್ಲಿ ನಡೆಯಲಿರುವ ರೋಡ್ ಶೋನಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಅದರಲ್ಲಿ ಹೇಳಲಾಗಿದೆ.
ಈ ರೋಡ್ ಶೋನಲ್ಲಿ ಮೋದಿ ಅವರು ಭಾಗವಹಿಸಲಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತು ರಾಜ್ಯ ಘಟಕ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ, ಮೋದಿ ಅವರು ಕೇರಳಕ್ಕೆ ಬಂದಿಳಿದಾಗ ಅವರಿಗೆ ಭವ್ಯ ಸ್ವಾಗತ ನೀಡುವುದಾಗಿ ತಿಳಿಸಿದೆ.
'ಇದು ಕೇರಳದ ಜನ ಕಾಯುತ್ತಿರುವ ಐತಿಹಾಸಿಕ ಕ್ಷಣ' ಎಂದು ಹೇಳಿರುವ ಬಿಜೆಪಿ ಘಟಕ, ಕೇರಳಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಜೂರು ಮಾಡಿರುವುದನ್ನು ಮೋದಿ ಅವರಿಂದ ಸಿಕ್ಕ 'ವಿಷ್ಣುವಿನ ಉಡುಗೊರೆ' ಎಂದು ಬಣ್ಣಿಸಿದೆ.


