HEALTH TIPS

ಸಂಬಳ ನೀಡಲು ನಕಾರ: ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿಯೇ ಒಡಿಶಾ ತಲುಪಿದ ಕಾರ್ಮಿಕರು

 

                 ಕೊರಾಪುಟ್‌,: ಬೆಂಗಳೂರಿಗೆ ಕೆಲಸಕ್ಕೆಂದು ಬಂದಿದ್ದ ಒಡಿಶಾ ಮೂಲದ ಮೂವರು ವಲಸೆ ಕಾರ್ಮಿಕರು 1,000 ಕಿ.ಮೀ.ಗೂ ಹೆಚ್ಚು ದೂರವನ್ನು ಕಾಲ್ನಡಿಗೆ ಮೂಲಕವೇ ಕ್ರಮಿಸಿ ಏಳು ದಿನಗಳಲ್ಲಿ ತಮ್ಮ ಊರಿಗೆ ತಲುಪಿದ್ದಾರೆ.

                   ಕಾರ್ಮಿಕರು ತಮ್ಮ ಮನೆಯನ್ನು ಭಾನುವಾರ ತಲುಪಿದ್ದು, ಭೌತಿಕವಾಗಿ ಅವರ ಬಳಿಯಿದ್ದಿದ್ದು ಕೇವಲ ಖಾಲಿ ಜೇಬು ಹಾಗೂ ನೀರಿನ ಬಾಟಲ್‌ಗಳು; ಮಾನಸಿಕವಾಗಿ ಇದ್ದದ್ದು ಅವರು ಅವರು ಅನುಭವಿಸಿದ ಶೋಷಣೆ, ಪಟ್ಟ ಪರಿಶ್ರಮ ಹಾಗೂ ದಾರಿಯಲ್ಲಿ ಸಹಾಯ ಮಾಡಿದ ಅನಾಮಿಕ ಜನರ ನೆನಪು ಮಾತ್ರ.

                  ಹೀಗೆ ಕಾಲ್ನಡಿಗೆ ಮೂಲಕ ಒಡಿಶಾದ ಕೊರಾಪುಟ್‌ವರೆಗೆ ತಲುಪಿದ್ದು ಕಾಳಹಂದಿ ಜಿಲ್ಲೆಯ ತಿಂಗಳ್ಕನ್‌ ಗ್ರಾಮದ ನಿವಾಸಿಗಳಾದ ಬುದು ಮಾಝಿ, ಕಟರ್‌ ಮಾಝಿ ಹಾಗೂ ಭಿಕಾರಿ ಮಾಝಿ.

                   ಈ ಮೂವರು ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ಮಾಲೀಕ ಸಂಬಳ ನೀಡಲು ನಿರಾಕರಿಸಿದ್ದರಿಂದ ಈ ಮೂವರ ಬಳಿ ಹಣ ಇರಲೇ ಇಲ್ಲವಾದ್ದರಿಂದ ಇಂಥ ಪ್ರಯಾಸಕರ ಪ್ರಯಾಣ ಕೈಗೊಂಡಿದ್ದರು.

                 ತಾವು ಉಳಿಸಿಟ್ಟಿದ್ದ ಅಲ್ಪ ಸ್ವಲ್ಪ ಹಣವನ್ನು ಮೂರು ಜನ ಖಾಲಿ ಮಾಡಿದ್ದರು. ಮಾಲೀಕ ಇವರಿಗೆ ಸಂಬಳವನ್ನೂ ನೀಡಿರಲಿಲ್ಲ. ಆದ್ದರಿಂದ ಈ ಕಾರ್ಮಿಕರ ಬಳಿ ಹಣ ಇರಲಿಲ್ಲ. ಮಾರ್ಚ್‌ 26ರಂದು ಅವರು ನಡೆದುಕೊಂಡೇ ಒಡಿಶಾದತ್ತ ಪ್ರಯಾಣ ಆರಂಭಿಸಿದ್ದರು.

              ಇವರ ಕಷ್ಟವನ್ನು ನೋಡಲಾರದೇ ಕೆಲವು ಅನಾಮಿಕ ದಾರಿಹೋಕರು ತಮ್ಮ ವಾಹನಗಳಲ್ಲಿ ತುಸು ದೂರದವರೆಗೆ ಇವರನ್ನು ಕರೆದೊಯ್ದಿದ್ದಾರೆ. ಹೋಟಲ್‌ನ ಮಾಲೀಕನೊಬ್ಬ ಇವರಿಗೆ ಉಚಿತವಾಗಿ ಆಹಾರ ನೀಡಿದ್ದಾನೆ. ಪೋತಂಗಿ ಬ್ಲಾಕ್‌ನ ಒಡಿಶಾ ಮೋಟರಿಸ್ಟ್‌ ಅಸೋಸಿಯೇಷನ್‌ನ ಅಧ್ಯಕ್ಷ ಭಗವಾನ್‌ ಪಾದಲ್‌ ಈ ಕಾರ್ಮಿಕರಿಗೆ ₹ 1,500 ಸಹಾಯ ಮಾಡಿದ್ದಲ್ಲದೇ, ಕಾಳಹಂದಿ ಬಳಿಯ ನಬರಂಗ್‌ಪುರದವರೆಗೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

                   ಬೆಂಗಳೂರಿಗೆ ಬಂದಿದ್ದ 12 ಕಾರ್ಮಿಕರ ಗುಂಪು: ಮಧ್ಯವರ್ತಿಯೊಬ್ಬನ ಸಹಾಯದಿಂದ ಬೆಂಗಳೂರಿನಲ್ಲಿ ಕೆಲಸ ಹುಡುಕಲು ಎರಡು ತಿಂಗಳ ಹಿಂದೆ ಒಡಿಶಾದಿಂದ ಬಂದ ವಲಸೆ ಕಾರ್ಮಿಕರ ಗುಂಪಿನಲ್ಲಿ ಈ ಮೂವರು ಇದ್ದರು. ಬೆಂಗಳೂರಿಗೆ ಬಂದ ತಕ್ಷಣ ಕೆಲಸವೂ ಸಿಕ್ಕಿತ್ತು. ಆದರೆ ಕಾರ್ಮಿಕರು ಎರಡು ತಿಂಗಳು ಕೆಲಸ ಮಾಡಿದರೂ ಇವರ ಮಾಲೀಕ ಸಂಬಳ ನೀಡಲು ನಿರಾಕರಿಸುತ್ತಿದ್ದ.

                ಸಂಬಳ ಕೇಳಿದ್ದಕ್ಕೆ ಹೊಡೆದರು: ತಮ್ಮ ಸಂಬಳ ಕೊಡುವಂತೆ ಮಾಲೀಕರನ್ನು ಕೇಳಿದಾಗ ಅವರು ನಮ್ಮನ್ನು ಹೊಡೆಯುತ್ತಿದ್ದರು. ಕಿರುಕುಳ ಸಹಿಸಲಾರದೇ ಬೆಂಗಳೂರನ್ನು ಬಿಟ್ಟು ಬಂದೆವು' ಎಂದು ಭಿಕಾರಿ ಮಾಝಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

              'ಕಾಲ್ನಡಿಗೆಯಲ್ಲಿ ಕೊರಾಪುಟ್ ತಲುಪಿದಾಗ ಮೂವರು ವಲಸೆ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ನಾವು ಅವರಿಗೆ ಆಹಾರ ನೀಡಿದೆವು. ಸ್ವಲ್ಪ ಹಣವನ್ನು ಸಂಗ್ರಹಿಸಿ ಅವರಿಗೆ ನೀಡಿ, ಅವರನ್ನು ಅವರ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದೆವು' ಎಂದು ಭಗವಾನ್‌ ಪಾದಲ್‌ ತಿಳಿಸಿದರು.

            ಈ ಕುರಿತು ಕೋರಾಪುಟ್‌-ಬೊಲಾಂಗಿರ್‌-ಕಾಳಹಂಡಿ (ಕೆಬಿಕೆ) ನಿವಾಸಿ, ಕಾಂಗ್ರೆಸ್‌ ಶಾಸಕ ಸಂತೋಷ್‌ ಸಿಂಗ್‌ ಸಲುಜಾ ಪ್ರತಿಕ್ರಿಯಿಸಿದ್ದು, 'ಈ ಘಟನೆ ವಲಸೆ ಕಾರ್ಮಿಕರ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. 23 ವರ್ಷದಿಂದ ಅಧಿಕಾರದಲ್ಲಿರುವ ನವೀನ್‌ ಪಟ್ನಾಯಕ್‌ ಅವರ ನೇತೃತ್ವದ ಸರ್ಕಾರ ವಿಫಲವಾಗಿದೆ' ಎಂದಿದ್ದಾರೆ.

              ಒಡಿಶಾ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಸರತ್‌ ಪಟ್ನಾಯಕ್‌ ಅವರು, 'ಜನರ ಬಗ್ಗೆ ಚಿಂತೆ ಮಾಡುವುನ್ನು ಬಿಟ್ಟು, ಹೂಡಿಕೆ ತರುವ ನೆಪದಲ್ಲಿ ಸರ್ಕಾರವು ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ಜಪಾನ್‌ಗೆ ಕಳುಹಿಸಲು ಹಣ ವ್ಯಯಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

                    ಪ್ರಸ್ತುತ ಒಡಿಶಾ ಮುಖ್ಯಮಂತ್ರಿ ಅವರು ಜಪಾನ್‌ ಪ್ರವಾಸದಲ್ಲಿದ್ದಾರೆ. ಕಾರ್ಮಿಕರ ಘಟನೆ ಕುರಿತು ಮಾತನಾಡಲು ಒಡಿಶಾದ ಕಾರ್ಮಿಕ ಸಚಿವ ಶ್ರೀಕಾಂತ್‌ ಸಾಹು ಹಾಗೂ ಕಾರ್ಮಿಕ ಆಯುಕ್ತ ಎನ್‌. ತಿರುಮಲ ಅವರಿಗೆ ಸುದ್ದಿಸಂಸ್ಥೆಯಿಂದ ಕರೆ ಮಾಡಲಾಯಿತು ಹಾಗೂ ಸಂದೇಶ ಕಳುಹಿಸಲಾಯಿತು. ಆದರೆ ಈ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries