ಅಹಮದಾಬಾದ್: ಮಾನನಷ್ಟ ಮೊಕದ್ದಮೆಯೊಂದರಲ್ಲಿ ಸೂರತ್‌ನ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯಿಂದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಗೋಪಿ ಅವರು ಬುಧವಾರ ಹಿಂದೆ ಸರಿದರು.
0
samarasasudhi
ಏಪ್ರಿಲ್ 27, 2023
ಅಹಮದಾಬಾದ್: ಮಾನನಷ್ಟ ಮೊಕದ್ದಮೆಯೊಂದರಲ್ಲಿ ಸೂರತ್‌ನ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯಿಂದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಗೋಪಿ ಅವರು ಬುಧವಾರ ಹಿಂದೆ ಸರಿದರು.
ಅರ್ಜಿ ವಿಚಾರಣೆಯನ್ನು ಬೇರೆ ನ್ಯಾಯಪೀಠಕ್ಕೆ ವಹಿಸುವುದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಈ ಅರ್ಜಿಯನ್ನು ಮರಳಿಸುವಂತೆ ಅವರು ನ್ಯಾಯಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಚಾರಣೆಯಿಂದ ಹಿಂದೆ ಸರಿಯುವುದಕ್ಕೆ ಅವರು ಯಾವುದೇ ಕಾರಣ ನೀಡಿಲ್ಲ.
ಇದಕ್ಕೂ ಮುನ್ನ, ನ್ಯಾಯಮೂರ್ತಿ ಗೀತಾ ಗೋಪಿ ಅವರಿದ್ದ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ರಾಹುಲ್ ಗಾಂಧಿ ಪರ ವಕೀಲ ಪಿ.ಎಸ್.ಚಂಪಾನೇರಿ, ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದರು.
ಇದಕ್ಕೆ ಸಹಾಯಕ ಸರ್ಕಾರಿ ವಕೀಲರು ವಿರೋಧ ವ್ಯಕ್ತಪಡಿಸಿದರು. ಆಗ ಪ್ರತಿಕ್ರಿಯಿಸಿದ ವಕೀಲ ಚಂಪಾನೇರಿ, 'ಇದು ಖಾಸಗಿ ದೂರು. ರಾಜ್ಯ ಸರ್ಕಾರಕ್ಕೂ ಇದಕ್ಕೂ ಏನೂ ಸಂಬಂಧ ಇಲ್ಲ. ಹೀಗಾಗಿ ತುರ್ತು ವಿಚಾರಣೆ ನಡೆಸಬೇಕು' ಎಂದು ಕೋರಿದರು.
ಎರಡೂ ಕಡೆಯವರ ಮಾತುಗಳನ್ನು ಆಲಿಸಿದ ನ್ಯಾಯಮೂರ್ತಿ ಗೀತಾ ಗೋಪಿ ಅವರು, ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು.