HEALTH TIPS

ದೇಶದ ಗಡಿ ಗ್ರಾಮಗಳ ಅಭಿವೃದ್ಧಿಗೆ 'ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ'

 

ಎಎಸ್‌, ಕೆಎಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಬಂಧ ರಚಿಸುವ ಪ್ರಶ್ನೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಬಂಧಕ್ಕೆ ಉಪಯುಕ್ತವಾಗುವ ಪ್ರಚಲಿತ ವಿದ್ಯಮಾನವನ್ನು ಇಲ್ಲಿ ಕೊಡಲಾಗಿದೆ.

ದೇಶದ ಗಡಿ ಭಾಗದಲ್ಲಿರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ವಿಶೇಷ ಯೋಜನೆ 'ವೈಬ್ರಂಟ್ ವಿಲೇಜಸ್‌ ಪ್ರೋಗ್ರಾಂ'.

ಇದು ಗಡಿ ಭಾಗದ ಹಳ್ಳಿಗಳ ಜನರು ವಲಸೆ ಹೋಗುವುದನ್ನು ತಪ್ಪಿಸುವುದು, ಗಡಿ ಭದ್ರತೆಯನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.

ವೈಬ್ರಂಟ್ ವಿಲೇಜಸ್‌ ಪ್ರೋಗ್ರಾಂ - ಯೋಜನೆಯಡಿ ಭಾರತದ ಉತ್ತರ ಭಾಗದಲ್ಲಿರುವ ಗಡಿ ಗ್ರಾಮಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಈ ಗಡಿ ಗ್ರಾಮಗಳಲ್ಲಿ ವಸತಿ ಯೋಜನೆ, ರಸ್ತೆ ಸಂಪರ್ಕ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು. ಈ ಮೂಲಕ ಅಲ್ಲಿನ ಜನರ ವಲಸೆ ತಪ್ಪಿಸುವುದು. ಜೊತೆಗೆ, ಗಡಿ ಭದ್ರತಾ ಸೇವೆಯನ್ನು ಬಲವರ್ಧನೆಗೊಳಿಸುವುದು. ಗಡಿ ಗ್ರಾಮಗಳಲ್ಲಿ ವಾಸಿಸುವ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿದೆ.

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ 'ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ'ಗೆ ಅನುಮೋದನೆ ನೀಡಿದ್ದು, ಇದು 2022-23ರಿಂದ 2025-26ರ ಹಣಕಾಸು ವರ್ಷಗಳ ಯೋಜನೆಯಾಗಿದೆ.

ಯೋಜನೆಯ ವ್ಯಾಪ್ತಿ

*. ದೇಶದ ಉತ್ತರ ಭಾಗದ ಗಡಿಯಲ್ಲಿರುವ 16 ರಾಜ್ಯಗಳಲ್ಲಿನ 117 ಗಡಿ ಜಿಲ್ಲೆಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 460 ಗಡಿ ಬ್ಲಾಕ್‌ಗಳಲ್ಲಿರುವ ಹಳ್ಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗಳ 3,488 ಗಡಿ ಪ್ರದೇಶಗಳಿವೆ.

* 2,963 ಗ್ರಾಮಗಳು ಯೋಜನೆ ವ್ಯಾಪ್ತಿಗೆ ಒಳಪಡಲಿವೆ. ಅವುಗಳಲ್ಲಿ 663 ಗ್ರಾಮಗಳು ಮೊದಲ ಹಂತದ ಕಾರ್ಯ ವ್ಯಾಪ್ತಿಯಲ್ಲಿವೆ.

* ಗ್ರಾಮ ಪಂಚಾಯ್ತಿಗಳ ನೆರವಿನೊಂದಿಗೆ ಜಿಲ್ಲಾಡಳಿತದಿಂದ ವೈಬ್ರಂಟ್ ವಿಲೇಜ್ ಕಾರ್ಯಕ್ರಮದ ಕ್ರಿಯಾ ಯೋಜನೆಗಳನ್ನು ರಚಿಸಲಾಗುತ್ತಿದೆ.

ಕಾರ್ಯಚಟುವಟಿಕೆಗಳು

* ಉತ್ತರ ಭಾರತದ ಗಡಿಯಲ್ಲಿರುವ ಗಡಿ ಗ್ರಾಮಗಳ ಸ್ಥಳೀಯ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಆಧಾರದ ಮೇಲೆ ಆರ್ಥಿಕ ವಲಯಗಳನ್ನು ಗುರುತಿಸಿ ಮತ್ತು ಅಭಿವೃದ್ಧಿಪಡಿಸುವುದು.

* ಸಾಮಾಜಿಕ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ 'ಹಬ್ ಮತ್ತು ಸ್ಪೋಕ್ ಮಾಡೆಲ್'ನಲ್ಲಿ ಬೆಳವಣಿಗೆ ಕೇಂದ್ರಗಳ ಅಭಿವೃದ್ಧಿ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಮೂಲಕ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವುದು.

* ಸ್ಥಳೀಯ ಸಾಂಸ್ಕೃತಿಕ, ಸಾಂಪ್ರದಾಯಕ ಜ್ಞಾನ ಮತ್ತು ಪರಂಪರೆಯ ಪ್ರಚಾರದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ.

* ಸಮುದಾಯ ಆಧಾರಿತ ಸಂಸ್ಥೆಗಳು, ಸಹಕಾರ ಸಂಸ್ಥೆಗಳು, ಎನ್‌ಜಿಒಗಳ ಮೂಲಕ 'ಒಂದು ಗ್ರಾಮ-ಒಂದು ಉತ್ಪನ್ನ' ಪರಿಕಲ್ಪನೆಯ ಮೇಲೆ ಸುಸ್ಥಿರ ಕೃಷಿಗೆ ಒತ್ತು.

ಯೋಜನೆಯ ಮಹತ್ವ

* ಕಡಿಮೆ ಜನಸಂಖ್ಯೆ, ಸೀಮಿತ ಸಂಪರ್ಕವಿರುವ ಮತ್ತು ಮೂಲಸೌಕರ್ಯಗಳಿಲ್ಲದ ಗಡಿ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದು.

* ಇದರಲ್ಲಿ ಗಡಿಯ ಭದ್ರತೆ ಸುಧಾರಣೆ. ಗಡಿ ಪ್ರದೇಶಗಳಲ್ಲಿ ಜನರು ತಮ್ಮ ಮೂಲಸ್ಥಳಗಳಲ್ಲೇ ಉಳಿಯಲು ಉತ್ತೇಜನ. ಈ ಮೂಲಕ ಗ್ರಾಮಗಳಿಂದ ವಲಸೆ ಹೋಗದಂತೆ ತಡೆಯುವುದು.

* ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಜೀವನೋಪಾಯದ ಅವಕಾಶಗಳ ಸೃಷ್ಟಿಗೆ ಆರ್ಥಿಕ ನೆರವು ಒದಗಿಸುವುದು.

* ಪ್ರತಿ ಹಳ್ಳಿಯಲ್ಲಿ ಸುಸ್ಥಿರ ಕೃಷಿ, ಡೇರಿ ಮತ್ತು ಮೀನುಗಾರಿಕೆ ಸಹಕಾರಿ ಸಂಘಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.

ಯೋಜನೆಗೆ ಹಣ ಬಿಡುಗಡೆ

ಕೇಂದ್ರ ಸಚಿವ ಸಂಪುಟವು ಈ ಯೋಜನೆ ಕಾರ್ಯಾರಂಭಕ್ಕಾಗಿ ಏಳು ಹೊಸ ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಬೆಟಾಲಿಯನ್‌ಗಳನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. ಹಾಗೆಯೇ ಚೀನಾ ಗಡಿಯಲ್ಲಿ ಸಾಮಾಜಿಕ ಮತ್ತು ಭದ್ರತಾ ಚೌಕಟ್ಟನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.

ಮೊದಲ ಹಂತದಲ್ಲಿ ₹4,800 ಕೋಟಿ ಬಿಡುಗಡೆ ಮಾಡಿದೆ. ಈ ಹಣದಲ್ಲಿ ₹2,500 ಕೋಟಿ ಮೊತ್ತವನ್ನು ರಸ್ತೆಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ.

ಇದರ ಭಾಗವಾಗಿ ಲಡಾಖ್‌ಗೆ ಸರ್ವಋತು ಸಂಪರ್ಕ ಕಲ್ಪಿಸುವ ಮನಾಲಿ-ದರ್ಚಾ-ಪಡುಮ್-ನಿಮ್ಮುಗಳ ನಡುವೆ 4.1 ಕಿ.ಮೀ. ಶಿಂಕು-ಲಾ ಸುರಂಗ ನಿರ್ಮಿಸಲು ಯೋಜಿಸಿದೆ. ಇದರ ಒಟ್ಟು ವೆಚ್ಚ ₹1,681 ಕೋಟಿ. ಈ ಸುರಂಗ ಡಿಸೆಂಬರ್ 2025ರೊಳಗೆ ಪೂರ್ಣಗೊಳ್ಳಲಿದೆ. ದೇಶದ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಇದು ಬಹಳ ಮುಖ್ಯವಾಗಿದೆ.‌ ಸುರಂಗವು ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಮತ್ತು ಪ್ರವಾಸೋದ್ಯಮ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಉತ್ತೇಜನ ನೀಡುತ್ತದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries