HEALTH TIPS

NCERT ಪಠ್ಯದಿಂದ RSS ನಿಷೇಧ, ಗಾಂಧೀಜಿ ಕುರಿತ ಉಲ್ಲೇಖಗಳನ್ನು ಕೈಬಿಟ್ಟ ಕ್ರಮ ಟೀಕಿಸಿದ ಇತಿಹಾಸಕಾರರು, ಶಿಕ್ಷಣ ತಜ್ಞರು

             ಗಾಂಧೀಜಿ ಅವರು ಹಿಂದು-ಮುಸ್ಲಿಂ ಏಕತೆಗೆ ನಡೆಸುತ್ತಿದ್ದ ಪ್ರಯತ್ನಗಳು ಹಿಂದು ತೀವ್ರಗಾಮಿಗಳಿಗೆ ಅಸಮಾಧಾನ ತಂದಿದ್ದ ಬಗ್ಗೆ, ಗಾಂಧೀಜಿ ಹತ್ಯೆ ನಂತರ ಆರೆಸ್ಸೆಸ್ ಮೇಲೆ ಹೇರಲಾಗಿದ್ದ ನಿಷೇಧ ಹಾಗೂ ಗಾಂಧೀಜಿಯ ಹಂತಹ ನಾಥೂರಾಮ್‌ ಗೋಡ್ಸೆ 'ಬ್ರಾಹ್ಮಣ' ಎಂಬ ಉಲ್ಲೇಖಗಳನ್ನು ಎನ್‌ಸಿಇಆರ್‌ಟಿ (NCERT) ಪಠ್ಯಪುಸ್ತಕಗಳಿಂದ ಕೈಬಿಟ್ಟಿರುವುದನ್ನು ಹಲವು ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರು ಟೀಕಿಸಿದ್ದಾರೆ.

                      ಇದು ಶಿಕ್ಷಣದ ರಾಜಕೀಕರಣದ ಯತ್ನ ಎಂದು ಹಲವರು ಆರೋಪಿಸಿದ್ದಾರೆ.

               ಖ್ಯಾತ ಸಮಾಜ ಶಾಸ್ತ್ರಜ್ಞ ಮತ್ತು ಕ್ಲಿನಿಕಲ್‌ ಸೈಕಾಲಜಿಸ್ಟ್‌ ಆಶಿಷ್‌ ನಂದಿ ಪ್ರತಿಕ್ರಿಯಿಸಿ, "ಇತಿಹಾಸದಲ್ಲಿ ಹಸ್ತಕ್ಷೇಪ ನಡೆಸುವುದು 20ನೇ ಶತಮಾನದ ಅತ್ಯಂತ ಅಪಾಯಕಾರಿ ವಿಚಾರಗಳಲ್ಲೊಂದಾಗಿದೆ. ಇದು ಇತಿಹಾಸವನ್ನು ತಿರುಚುವ ಯತ್ನ. ನಾಝಿ ಜರ್ಮನಿ ಕೂಡ ಮಾಡಿತ್ತು. ಅದೇ ರೀತಿ ಈಗ ಮಾಡಲಾಗುತ್ತಿದೆ. ಸರಕಾರದಿಂದ ಪರಿಶೀಲಿಸಲ್ಪಟ್ಟ ಇತಿಹಾಸವನ್ನುಪ್ರಸ್ತುತಪಡಿಸುವ ಯತ್ನ,"ಎಂದು ಅವರು ಹೇಳಿದರು.

                   ಜೆಎನ್‌ಯುವಿನ ಮಾಜಿ ಇತಿಹಾಸ ಪ್ರೊಫೆಸರ್‌ ಮೃದುಲಾ ಮುಖರ್ಜಿ ಪ್ರತಿಕ್ರಿಯಿಸಿ, ಎನ್‌ಸಿಇಆರ್‌ಟಿ ವಿಶ್ವಾಸಾರ್ಹವಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ ಎಂದರು. ಇತಿಹಾಸಕಾರ ಪ್ರೊ ಇರ್ಫಾನ್‌ ಹಬೀಬ್‌, ಇದು ರಾಜಕೀಯವಲ್ಲದೆ ಮತ್ತಿನ್ನೇನಲ್ಲ ಎಂದಿದ್ದಾರೆ. ಈ ಕ್ರಮವು ಇತಿಹಾಸಕ್ಕಿಂತ ಈಗಿನ ರಾಜಕಾರಣಕ್ಕೆ ಹೆಚ್ಚು ಸಂಬಂಧಿಸಿದೆ ಎಂದು ಅವರು ಹೇಳಿದ್ದಾರೆ.

                   ದಿಲ್ಲಿ ವಿವಿಯ ನಿವೃತ್ತ ಇತಿಹಾಸ ಪ್ರೊಫೆಸರ್‌ ಕೆ ಎನ್‌ ಶ್ರೀಮಳಿ ಅವರು ಇದನ್ನು ಬಿಜೆಪಿಯ ಹಳೆಯ ಆಟ ಎಂದು ಬಣ್ಣಿಸಿದ್ದಾರೆ.

                  ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿ ಇತಿಹಾಸವನ್ನು ಕೋಮು ಆಧಾರಿತವಾಗಿ ಮರುಬರೆಯುವುದು ತೀವ್ರಗೊಂಡಿದೆ ಎಂದು ಬಣ್ಣಿಸಿದರೆ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಅವರು "ದ್ವೇಷದಿಂದ ವೈಟ್‌ವಾಶ್‌ ಮಾಡುವ ಯತ್ನ," ಎಂದು ಹೇಳಿದ್ದಾರೆ.

                 ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗ ಹಾಗೂ ಲೇಖಕ ತುಷಾರ್‌ ಗಾಂಧಿ ಪ್ರತಿಕ್ರಿಯಿಸಿ, ಎನ್‌ಸಿಇಆರ್‌ಟಿ ಕ್ರಮದಿಂದ ತಮಗೆ ಅಚ್ಚರಿಯಾಗಿಲ್ಲ ಎಂದಿದ್ದಾರೆ. "ಇದು ಸಂಘ ಪರಿವಾರದ ನಿರೀಕ್ಷಿತ ಕ್ರಮ. ನನಗೆ ಆಶ್ಚರ್ಯವಾಗಿಲ್ಲ," ಎಂದಿದ್ದಾರೆ.

                    "ಅವರು ತಮಗೆ ಅನುಕೂಲಕರವಾದ ರೀತಿಯಲ್ಲಿ ಇತಿಹಾಸ ಬರೆಯುತ್ತಿದ್ದಾರೆ, ಇದು ದುರಂತ, ಅವರು ಶಿಕ್ಷಣದ ರಾಜಕೀಕರಣ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಕಳವಳಕಾರಿ ವಿಷಯ. ಅವರು ಜಾಗತಿಕವಾಗಿ ಭಾರತದ ವರ್ಚಸ್ಸಿಗೆ ಕಳಂಕ ತರುತ್ತಿದ್ದಾರೆ ಹಾಗೂ ಜಗತ್ತಿನೆದುರು ನಮ್ಮನ್ನು ಅಪಹಾಸ್ಯದ ವಸ್ತುವನ್ನಾಗಿಸುತ್ತಿದ್ದಾರೆ," ಎಂದು ಅವರು ಹೇಳಿದ್ದಾರೆ.

               "ಈಗ ಅವರು ಅಧಿಕಾರದಲ್ಲಿದ್ದಾರೆ ಅದಕ್ಕೆ ತಮ್ಮ ಅಜೆಂಡಾ ಮುಂದುವರಿಸಲು ಅದನ್ನು ಬಳಸುತ್ತಿದ್ದಾರೆ. ಇದು ಹೆಚ್ಚಾಗಲಿದೆ. ಭಾರತದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಅವರು ಹೇಳಿಕೊಳ್ಳುತ್ತಾರೆ, ಆದರೆ ವಾಸ್ತವವಾಗಿ ಜಾಗತಿಕವಾಗಿ ಅವರೇ ಭಾರತದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ," ಎಂದು ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries